ಶಾಲೆ ಬಿಡದಂತೆ ಮನವೊಲಿಕೆ, ಪಾಲಕರಿಗೆ ಕಿವಿಮಾತು ಹೇಳಿದ ಬೋಧಕರು

ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರು ಹಾಜರ್
ದೇವದುರ್ಗ,ಮಾ.೦೬- ತಾಲೂಕಿನ ನಾಗಡದಿನ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ವಿದ್ಯಾರ್ಥಿಗಳು ಗೈರಾದ ಹಿನ್ನೆಲೆಯಲ್ಲಿ ಶಿಕ್ಷಕರು ಮಕ್ಕಳ ಮನೆಮನೆಗೆ ತೆರಳಿ ಶಾಲೆ ಬರುವಂತೆ ಮನವೊಲಿಸುವ ಜತೆಗೆ ಪಾಲಕರಿಗೆ ಅರಿವು ಮೂಡಿಸಿದರು.
ದೈಹಿಕ ಶಿಕ್ಷಕ ಬಸವರಾಜಗೌಡ ಮಾತನಾಡಿ, ಶಾಲೆಯಲ್ಲಿ ಪರೀಕ್ಷೆ ಸಮಯ ಆರಂಭವಾಗಿದ್ದು, ಇಂಥ ಹೊತ್ತಿನಲ್ಲಿ ವಿದ್ಯಾರ್ಥಿಗಳು ಗೈರಾಗುವುದು ಶಿಕ್ಷಣ ಕಲಿಕೆ ಕುಂಠಿತಗೊಳ್ಳಲಿದೆ. ಪ್ರೌಢಶಾಲೆ ಮಕ್ಕಳು ನಾನಾ ಕಾರಣ ಹೇಳಿ ಗೈರಾಗುತ್ತಿದ್ದು ಅವರ ಮನವೊಲಿಸಲು ಶಿಕ್ಷಕರು ಮನೆಮನೆಗೆ ಭೇಟಿ ನೀಡುತ್ತಿದ್ದೇವೆ. ಸದ್ಯ ಪರೀಕ್ಷೆ ಬರುತ್ತಿದ್ದು ಶಾಲೆಗೆ ಹಾಜರಾದರೆ ಕಲಿಕೆಗೆ ಅನುಕೂಲವಾಗಿದ್ದು, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬಹುದು.
ಪಾಲಕರು ಮಕ್ಕಳಿಗೆ ಯಾವುದೇ ಕಾರಣಕ್ಕೂ ಕೂಲಿಕೆಲಸಕ್ಕೆ ಕಳಿಸಬಾರದು. ಪರೀಕ್ಷೆ ಸಂದರ್ಭದಲ್ಲಿ ಮನೆಕೆಲಸ ನೀಡಬಾರದು. ಸಣ್ಣಪುಟ್ಟ ಕೆಲಸ ನೀಡಿ, ಆದರೆ ಶಾಲೆಗೆ ಗೈರಾಗುವಂಥ ಕೆಲಸ ಕೊಡಬಾರದು. ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದ್ದು, ನೀವು ಕುಂತು ಮಕ್ಕಳ ಜೀವನ ಹಾಳು ಮಾಡಬೇಡಿ. ಶಿಕ್ಷಣದಿಂದಲೇ ಜೀವನದಲ್ಲಿ ಮುಂದೆಬರಲು ಸಾಧ್ಯ ಎಂದು ಪಾಲಕರ ಮನವೊಲಿಸಿದರು.
ನಾಗಡದಿನ್ನಿ ಗ್ರಾಮದ ನಂತರ ಹೆಗ್ಗಡದಿನ್ನಿ, ತಿಪ್ಪಲದಿನ್ನಿ ಗ್ರಾಮಕ್ಕೆ ಶಿಕ್ಷಕರು ತೆರಳಿ ಪಾಲಕರ ಮನವೊಲಿಸಿದರು. ಮುಖ್ಯಶಿಕ್ಷಕಿ ಎಸ್.ಡಿ.ಪದ್ಮಜಾ, ಶಿಕ್ಷಕರಾದ ಶ್ರೀನಿವಾಸ್ ಹೆಳವಾರ, ಗಾಳೆಪ್ಪ ಬೆಳಗುಂಪಿ, ರಾಮಪ್ಪ ನಾಯಕ, ಸುಧಾಕರ್ ಪಾಟೀಲ್, ಚನ್ನಯ್ಯಸ್ವಾಮಿ, ನಿರ್ಮಲಾ, ಮುಕ್ತಾಯಿ ಇತರರಿದ್ದರು.