ಶಾಲೆ ಬಳಿ ಸ್ಫೋಟಕ ಪತ್ತೆ ಹೆಚ್ಚಿದ ಆತಂಕ

ಬೆಂಗಳೂರು,ಮಾ.೧೯-ವೈಟ್ ಫೀಲ್ಡ್ ನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಮಾಸುವ ಮುನ್ನವೇ ನಗರದ ಶಾಲೆಯೊಂದರ ಮುಂಭಾಗದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.ಜಿಲೆಟಿನ್ ಕಡ್ಡಿ, ಡಿಟೋನೇಟರ್ ಹಾಗೂ ಇತರ ಕೆಲವು ಸ್ಫೋಟಕಗಳು ಬೆಳ್ಳಂದೂರಿನ ಪ್ರಕ್ರಿಯಾ ಶಾಲೆ ಮುಂಭಾಗದ ಖಾಲಿ ಜಮೀನಿನಲ್ಲಿ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.ಸ್ಫೋಟಕಗಳನ್ನು ಟ್ರಾಕ್ಟರ್ ಒಂದರಲ್ಲಿ ಇಡಲಾಗಿತ್ತು. ಮೆಲ್ನೋಟಕ್ಕೆ ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿ ಬಂಡೆಗಳ ಸ್ಫೋಟಿಸಲು ಸ್ಫೋಟಕಗಳನ್ನು ತಂದಿರುವ ಮಾಹಿತಿ ಲಭ್ಯವಾಗಿದೆ. ಆದರೆ, ಅಕ್ರಮವಾಗಿ ಸ್ಫೋಟಕ ವಸ್ತು ಸಂಗ್ರಹಿಸಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಬೆಳ್ಳಂದೂರು ಪೊಲೀಸರು ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಂಗ್ರಹ ಮಾಡಿದ್ದಾರೆ ಎಂದು ಪೊಲೀಸರು ಸ್ವಯಂಪ್ರೇರಿತರಾಗಿ ಕೇಸ್ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಕಳೆದ ಮಾ.೧ ರಂದು ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಪೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು.ಘಟನೆ ಬಗ್ಗೆ ಸಿಸಿಬಿ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ದಳ(ಎನ್ ಐಎ)ತನಿಖೆ ನಡೆಸುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಬಿಡುಗಡೆ ಮಾಡಲಾಗಿದೆ. ಆದಾಗ್ಯೂ, ಕೆಫೆಯಲ್ಲಿ ಬಾಂಬ್ ಇಟ್ಟು ಹೋಗಿದ್ದ ಉಗ್ರನನ್ನು ಬಂಧಿಸಲು ಇನ್ನೂ ಸಾಧ್ಯವಾಗಿಲ್ಲ.
ಬಾಂಬ್ ಬೆದರಿಕೆ ಸಂದೇಶ:
ನಗರದ ಶಾಲೆಗಳಿಗೆ ಇತ್ತೀಚೆಗೆ ಬಾಂಬ್ ದಾಳಿ ಬೆದರಿಕೆ ಸಂದೇಶ ಬಂದಿತ್ತು. ನಂತರ ಅದು ನಕಲಿ ಬೆದರಿಕೆ ಎಂಬುದು ತಿಳಿದು ಬಂದಿದ್ದರೂ, ಬೆದರಿಕೆ ಸಂದೇಶದ ಹಿಂದೆ ವಿದೇಶಿ ಉಗ್ರ ಸಂಘಟನೆಗಳ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅದಾದ ನಂತರ ಕೆಲವು ದಿನಗಳಲ್ಲಿ ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳ ಶಾಲೆಗಳಿಗೂ ಬೆದರಿಕೆ ಸಂದೇಶ ಬಂದಿತ್ತು. ಇಂಥ ಸಂದರ್ಭದಲ್ಲಿ ಬೆಂಗಳೂರಿನ ಶಾಲೆಯ ಆವರಣದಲ್ಲಿ ಸ್ಪೋಟಕ ವಸ್ತುಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.