ಶಾಲೆ ಪ್ರಾರಂಭ : ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತ

ಸಂಜೆವಾಣಿ ವಾರ್ತೆ
ಹೂವಿನಹಡಗಲಿ ಸೆ 07 : ತಾಲೂಕಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳು ಸೋಮವಾರದಿಂದ ಪ್ರಾರಂಭವಾಗಿದ್ದು, ಬಹುದಿನಗಳ ಬಳಿಕ ಶಾಲೆಯಲ್ಲಿ ಮಕ್ಕಳ ಕಲರವ ಕೇಳಿಬಂತು.
ಒಂದೂವರೆ ವರ್ಷದ ಬಳಿಕ ವಿದ್ಯಾರ್ಥಿಗಳು ಕೋವಿಡ್ ಆತಂಕ ಮರೆತು ಶಾಲೆಗಳತ್ತ ಹೆಜ್ಜೆ ಹಾಕಿದರು. ತಾಲೂಕಿನ ಎಲ್ಲ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸುದೀರ್ಘ ರಜೆಯ ಬಳಿಕ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು, ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಗುಲಾಬಿ ಹೂ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
ತಾಲೂಕಿನ ಎಲ್ಲ ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, 6 ರಿಂದ 8ನೇ ತರಗತಿಯ ಭೌತಿಕ ತರಗತಿಗಳನ್ನು ಪ್ರಾರಂಭಿಸಿದ್ದೇವೆ. ವಿದ್ಯಾರ್ಥಿಗಳು ಉತ್ಸಾಹದಿಂದಲೇ ಶಾಲೆಗೆ ಬಂದಿದ್ದಾರೆ. ಮೊದಲ ದಿನ ಶೇ 65ರಷ್ಟು ಹಾಜರಾತಿ ಇತ್ತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಪ್ರಕಾಶ್ ತಿಳಿಸಿದರು.