ಶಾಲೆ ಪ್ರಾರಂಭ ದಿನದ ಹುಮ್ಮಸ್ಸು ಕೊನೆಯವರೆಗೂ ಇರಲಿ

ಕೋಲಾರ,ಜೂ,೨- ವಿದ್ಯಾರ್ಥಿಗಳು ಮೊದಲ ದಿನದಂದು ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದು, ಕೊನೆಯ ದಿನದವರೆಗೂ ಇದೇ ರೀತಿಯಲ್ಲಿ ಚಟುವಟಿಕೆಯಿಂದ ಇದ್ದು, ಪಾಠ- ಪ್ರವಚನ ಸೇರಿದಂತೆ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಾಲೆ ಹಾಗೂ ತಂದೆ-ತಾಯಿಗೆ ಕೀರ್ತಿ ತರಬೇಕೆಂದು ರವಿ ಸಂಸ್ಥೆಯ ಕಾರ್ಯದರ್ಶಿ ಮೂರಂಡಹಳ್ಳಿ ಡಾ.ಇ.ಗೋಪಾಲಪ್ಪ ಕರೆ ನೀಡಿದರು.
ನಗರದ ಗೌರಿಪೇಟೆಯಲ್ಲಿರುವ ರವಿ ಇಂಟರ್‌ನ್ಯಾಷನಲ್ ಶಾಲೆಯ ಆರಂಭೋತ್ಸವಕ್ಕೆ ಚಾಲನೆ ನೀಡಿದ ಅವರು ಮಾತನಾಡಿ ಜೂ.೧ರಿಂದ ಶಾಲೆಗಳು ಆರಂಭಗೊಳ್ಳಿಸುವ ಕುರಿತು ಸರಕಾರದ ಆದೇಶದಂತೆ ಪ್ರಾರಂಭಿಸಲಾಗಿದೆ. ಪೋಷಕರು ಮಕ್ಕಳ ವ್ಯಾಸಂಗಕ್ಕೆ ಮುಕ್ತ ಅವಕಾಶ ನೀಡುವುದರ ಜತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಉತ್ತೇಜನ ನೀಡಬೇಕೆಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಜಿ.ನರೇಶ್‌ಬಾಬು ಮಾತನಾಡಿ, ಮಕ್ಕಳು ಪಾಠದ ಜತೆಜತೆಗೆ ಕ್ರೀಡೆಗಳಲ್ಲಿಯೂ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಆಸಕ್ತಿ ವಹಿಸಿ ವ್ಯಾಸಂಗ ಮಾಡುವುದರಿಂದಾಗಿ ಹೆಚ್ಚಿನ ಅಂಕಗಳನ್ನು ಪಡೆಯಬಹುದು. ಆ ಮೂಲಕ ಶಾಲೆ, ತಮ್ಮ ಪೋಷಕರಿಗೂ ಒಳ್ಳೆಯ ಹೆಸರು ಬರುತ್ತದೆ ಎಂದ ಅವರು, ಮುಂದೆ ನಿಮ್ಮ ಜೀವನದಲ್ಲಿ ಉತ್ತಮ ಭವಿಷ್ಯವನ್ನೂ ಹೊಂದಬಹುದು ಎಂದು ಸಲಹೆ ನೀಡಿದರು.
ಪೋಷಕ ಕಾಡಹಳ್ಳಿ ಶಶಿಕುಮಾರ್ ಮಾತನಾಡಿ, ರವಿ ಶಿಕ್ಷಣ ಸಂಸ್ಥೆಯಲ್ಲಿ ಸೇರುವುದರಿಂದ ಉತ್ತಮ ಶಿಕ್ಷಣದ ಜತೆಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದಕ್ಕೂ ಮಕ್ಕಳಿಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ರವಿ ಇಂಟರ್ ನ್ಯಾಷನಲ್ ಶಾಲೆಯ ಮುಖ್ಯಶಿಕ್ಷಕಿ ನಾಜಿಯಾ ಸುಲ್ತಾನಾ, ಬಿಇಡಿ ಪ್ರಾಂಶುಪಾಲ ಮಂಜುನಾಥರೆಡ್ಡಿ, ಪದವಿ-ಪದವಿ ಪೂರ್ವ ಪ್ರಾಂಶುಪಾಲ ಸಲೀಂ ಪಾಷ ಮತ್ತು ಶಿಕ್ಷಣ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.