ಶಾಲೆ ಪ್ರಾರಂಭೋತ್ಸವ : ಮೆಳ್ಳೆಕಟ್ಟೆ ಶಾಲೆಗೆ ಸಿಇಓ ಭೇಟಿ

ದಾವಣಗೆರೆ ಜ.2; ಕೋವಿಡ್ -19 ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶಿಕ್ಷಣ ಪಡೆಯುವುದು ಅನಿವಾರ್ಯ ಹಾಗೂ ಅವಶ್ಯಕತೆ ಇದೆ. ಶಿಕ್ಷಣ ಪಡೆಯುವಲ್ಲಿ ಕೊರೊನಾದಂತಹ ಯಾವುದೇ ಸಾಂಕ್ರಾಮಿಕ ರೋಗಗಳು ಅಡ್ಡಿಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ ಶಿಕ್ಷಣ ಪಡೆಯುವುದು ಅವಶ್ಯ ಎಂದು ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ ಹೇಳಿದರು.      ಜ.1 ರಂದು ಸರ್ಕಾರದ ಆದೇಶದಂತೆ ಶಾಲೆ ಪ್ರಾರಂಭೋತ್ಸವ ಹಾಗೂ ವಿದ್ಯಾಗಮ-2 ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಇವರು ಮೆಳ್ಳೆಕಟ್ಟೆಯ ಸರ್ಕಾರಿ ಪ್ರೌಢಶಾಲೆಯ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಗುಲಾಬಿ ಹೂ ನೀಡಿ, ಹಿತ ನುಡಿಗಳನ್ನಾಡಿದರು.ಮೆಳ್ಳೆಕಟ್ಟೆ ಸರ್ಕಾರಿ ಪ್ರೌಢಶಾಲೆ 05 ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.100 ರಷ್ಟು ಪಡೆದಿದ್ದು ಶಿಕ್ಷಣದ ಗುಣಮಟ್ಟವನ್ನು ತೋರಿಸುತ್ತಿದೆ ಎಂದ ಅವರು ಈ ವರ್ಷ ಎಸ್‌ಎಸ್‌ಎಲ್‌ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಆರ್.ರಶ್ಮಿ ಇವರಿಗೆ ಇಲಾಖೆಯಿಂದ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಿ, ಇಂತಹ ಪ್ರತಿಭೆಗಳು ಇನ್ನೂ ಹೆಚ್ಚೆಚ್ಚು ಹೊರ ಬರಬೇಕು. ಈ ಬಗ್ಗೆ ಪಾಲಕರು ಮಕ್ಕಳಿಗೆ ಹೆಚ್ಚಾಗಿ ಶೈಕ್ಷಣಿಕ ಸೌಕರ್ಯ ಕಲ್ಪಿಸಿಕೊಟ್ಟು ನಿರಂತರ ಹಾಜರಾತಿಯನ್ನು ಕಾಪಾಡಿಕೊಳ್ಳುವಂತೆ ತಿಳಿಸಿ, ಮಕ್ಕಳು ಹೆಚ್ಚು ಹೆಚ್ಚು ಓದುವ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು     ದಾವಣಗೆರೆ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಕೊಟ್ರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಾವಣಗೆರೆ ಉತ್ತರ ವಲಯ ಕ್ಷೇತ್ರ ಸಮನ್ವಯಾಧಿಕಾರಿ ಸುರೇಂದ್ರನಾಯ್ಕ ಮಾತನಾಡಿದರು. ಮುಖ್ಯಶಿಕ್ಷಕ ರಾಮಪ್ಪ ಪಿ.ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಪ್ಪ, ಗ್ರಾ.ಪಂ ಸದಸ್ಯರಾದ ಸಣ್ಣಚನ್ನಬಸಪ್ಪ, ಎ.ಕೆ.ಹನುಮಂತಪ್ಪ, ಬಿ.ಕೆ.ಮಂಜುನಾಥ, ಕವಿತಾ, ಹನುಮಂತಮ್ಮ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್‌ಕುಮಾರ್ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕ ಶಿವಯ್ಯ ನಿರೂಪಿಸಿದರು. ಬಸವರಾಜಗೌಡ ಎಂ ವಂದಿಸಿದರು ಎಂದು ಪ್ರಕಟಣೆ ತಿಳಿಸಿದೆ.