ಶಾಲೆ ಪುನರಾರಂಭ  ಡಿ ಡಿ ಪಿ ಐ ಪರಿಶೀಲನೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.30: ಶಾಲೆಗಳ ಪ್ರಾರಂಭೋತ್ಸವವನ್ನು ಹಬ್ಬದ ರೀತಿ ಆಚರಿಸಬೇಕು, ಮಕ್ಕಳು ಶಾಲೆಗೆ ಸಂಭ್ರಮದಿಂದ ಬರುವಂತಾಗಬೇಕು ಎಂದು ಬಳ್ಳಾರಿ ಜಿಲ್ಲಾ ಉಪನಿರ್ದೇಶಕ ಅಂದಾನಪ್ಪ ವಡಗೇರಿ ತಿಳಿಸಿದರು.
ತಾಲ್ಲೂಕಿನ ಶಾನವಾಸಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಭೇಟಿ ನೀಡಿ ಶಾಲೆಗಳ ಪುನರಾರಂಭ ಕುರಿತಂತೆ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸಿನೇ ನಡೆಸಿ  ಮಾತನಾಡಿದರು.
ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಸಿಹಿಯನ್ನು ಹಂಚಬೇಕು  ಶಾಲೆಯ ಮುಖ್ಯ ಶಿಕ್ಷಕರು ಸ್ಥಳೀಯ ಜನಪ್ರತಿನಿಧಿಗಳು ಶಾಲೆಗೆ ಶ್ರಮದಾನ ಮೂಲಕ ಸರ್ಕಾರಿ ಶಾಲೆಯ ಅಭಿವೃದ್ದಿಯ ಜೊತೆ ಮಕ್ಕಳನ್ನು ಶಾಲೆಗೆ ಖುಷಿಯಿಂದ ಬರುವಂತೆ ನೋಡಿಕೊಳ್ಳಬೇಕು.
ಶಾಲಾ ಪ್ರಾರಂಭೋತ್ಸವದಲ್ಲಿ  ಸ್ಥಳೀಯ ಜನಪ್ರತಿನಿಧಿಗಳು, ನಾಗರಿಕರು, ಪೋಷಕರು, ಹಿರಿಯ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಮಕ್ಕಳಲ್ಲಿ ಸ್ಥೈರ್ಯ ತುಂಬವ ಕೆಲಸ ಮಾಡಬೇಕು. ಶಾಲೆಗಳಲ್ಲಿ ತೋರಣ ಕಟ್ಟಿ, ರಂಗೋಲಿ ಬಿಡಿಸಿ ಮಕ್ಕಳನ್ನು ಸ್ವಾಗತಿಸಬೇಕು. ಹಾಜರಾತಿ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಪುಸ್ತಕ ಹಾಗೂ ಬಟ್ಟೆಯನ್ನು ಸಮರ್ಪಕವಾಗಿ ವಿತರಿಸಿ, ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ತರಗತಿ ಮತ್ತು ಶಿಕ್ಷಕರ ವೇಳಾಪಟ್ಟಿ ತಯಾರಿಸಿ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ಸೋಮವಾರ ಮತ್ತು ಮಂಗಳವಾರ ಪೂರ್ವ ಸಿದ್ಧತಾ ದಿನಗಳಾಗಿದ್ದು ಶಿಕ್ಷಕರು ಶಾಲೆಯ ಆವರಣ, ಆಟದ ಮೈದಾನ, ಅಡುಗೆ ಮನೆ, ಶೌಚಾಲಯ, ಕೊಠಡಿಗಳನ್ನು ಮುಂಚಿತವಾಗಿಯೇ ಸ್ವಚ್ಛಗೊಳಿಸಿ, ಬುಧವಾರ ಮೇ 31ಕ್ಕೆ ಮಕ್ಕಳು ಪೂರ್ಣ ಪ್ರಮಾಣದಲ್ಲಿ ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ರೆಹಮತ್ ಉಲ್ಲಾ ಖಾದರ್, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸವಿತಾ ಎಚ್. ಎಂ,ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಶ್ರೀನಿವಾಸ ಆಚಾರಿ ಇದ್ದರು.

One attachment • Scanned by Gmail