ಶಾಲೆ ಪುನರಾರಂಭ : ಜಿಲ್ಲಾಧಿಕಾರಿಗಳಿಂದ ಸರಕಾರಿ ಶಾಲೆಗೆ ಭೇಟಿ-ಪರಿಶೀಲನೆ

ವಿಜಯಪುರ, ಜೂ.02: ಜಿಲ್ಲಾಧಿಕಾರಿಗಳಾದ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಗುರುವಾರ ವಿಜಯಪುರ ತಾಲೂಕಿನ ಕುಮಟಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಕುರಿತು ಪರಿಶೀಲಿಸಿದರು.

ರಜೆ ಕಳೆದು, ಜಿಲ್ಲೆಯಲ್ಲಿ ಶಾಲೆಗಳು ಪುನರಾರಂಭಗೊಂಡಿದ್ದು, ಶಾಲೆಯ ದಾಖಲಾಗಿರುವ ಮಕ್ಕಳು ಕಲಿಕೆಯಿಂದ ಹೊರಗುಳಿಯದಂತೆ ಎಲ್ಲಾ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮಕ್ಕಳ ಪಾಲಕರಿಗೆ ತಿಳಿ ಹೇಳಬೇಕು. ಮಗುವಿನ ಸವಾರ್ಂಗೀಣ ವ್ಯಕ್ತಿತ್ವದ ಬೆಳವಣಿಗೆಯ ಹಿತ ದೃಷ್ಟಿಯಿಂದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ರೂಪಿಸಿಕೊಂಡು ಪರಿಣಾಮಕಾರಿ ಕಲಿಕೆಗೆ ಒತ್ತು ನೀಡಬೇಕು ಎಂದು ಮುಖ್ಯೋಪಾಧ್ಯಾಯರಿಗೆ ಸೂಚನೆ ನಿಡಿದರು. ಪ್ರಸಕ್ತ ಸಾಲಿನ ಹತ್ತನೇ ಹಾಗೂ ಪಿಯುಸಿಯಲ್ಲಿ ಜಿಲ್ಲೆಯ ಶೈಕ್ಷಣಿಕ ಸಾಧನೆ ಅತ್ಯುತ್ತಮವಾಗಿದೆ. ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಬೋಧನೆ ಮಾಡಬೇಕು ಎಂದು ಹೇಳಿದರು.

ಶಾಲೆಯಲ್ಲಿ ದಾಖಲಾದ ಮಕ್ಕಳ ಹಾಜರಾತಿ, ಶಾಲಾ ಶಿಕ್ಷಕರ ಹಾಜರಾತಿ, ಶಾಲಾ ಮೂಲಭೂತ ಸೌಕರ್ಯ ಮತ್ತು ಬಿಸಿ ಊಟ ವ್ಯವಸ್ಥೆ ವೀಕ್ಷಿಸಿ, ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.