ಶಾಲೆ ಆರಂಭ: ಎಸ್‍ಒಪಿ ಪಾಲನೆಗೆ ಸೂಚನೆ

ಚಿತ್ರದುರ್ಗ, ಡಿ.೩೧; ಶಾಲೆ ಆರಂಭಕ್ಕೆ ಸಿದ್ದತೆಗಳು ನಡೆದಿದ್ದು, ಕೋವಿಡ್-19 ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಟ್ಟುನಿಟ್ಟಾಗಿ ಎಸ್‍ಒಪಿ ಪಾಲನೆ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ವಿ.ಅನ್ಬುಕುಮಾರ್ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಚೇರಿಯ ಎಸ್‍ಎಸ್‍ಕೆ ಸಭಾಂಗಣದಲ್ಲಿ  ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಶಾಲೆ ಆರಂಭ ವಾಗದೇ ಇರುವುದರಿಂದ ಮಕ್ಕಳಲ್ಲಿ ಕಲಿಕೆ ಆಸಕ್ತಿ ಕಡಿಮೆಯಾಗುತ್ತಿದೆ. ಎಲ್ಲ ವಿಷಯಗಳನ್ನು ಆನ್‍ಲೈನ್ ಬೋಧನೆ ಮೂಲಕ ಅರ್ಥ ಮಾಡಿಸಲು ಸಾಧ್ಯವಿಲ್ಲ. ಗಣಿತ ವಿಷಯವನ್ನು ಆನ್‍ಲೈನ್ ಬೋಧನೆಯಲ್ಲಿ ಕಲಿಯುವುದು ಕಷ್ಟsಸಾಧ್ಯ ಎಂದರು.
 ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಕಟ್ಟುನಿಟ್ಟಾಗಿ ಎಸ್‍ಒಪಿ ಪಾಲನೆ ಮಾಡಬೇಕು. ಎಲ್ಲಾ ಶಾಲೆಗಳಿಗೆ ಎಸ್‍ಒಪಿ ಕಳುಹಿಸಿಕೊಡಬೇಕು. ಎಲ್ಲ ಶಿಕ್ಷಕರು ಮುನ್ನೆಚ್ಚರಿಕೆ ವಹಿಸಿ ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.
 ಶಿಕ್ಷಕರಿಂದ ಯಾವುದೇ ರೋಗ ಮಕ್ಕಳಿಗೆ ಹರಡಬಾರದು. ಮಕ್ಕಳಿಂದ ಮಕ್ಕಳಿಗೆ ರೋಗ ಹರಡಬಾರದು. ಶಿಕ್ಷಕರು ಹಾಗೂ ಮಕ್ಕಳ ರಕ್ಷಣೆಯು ಮುಖ್ಯವಾಗಿದೆ. ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಸೋಂಕಿನ ಲಕ್ಷಣಗಳು ಕಂಡುಬಂದಾಗ ಐಸೋಲೇಷನ್ ಮಾಡಬೇಕು ಹಾಗೂ ಪೋಷಕರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲು ಮಾಡಿಸಲು ಕ್ರಮಕೈಗೊಳ್ಳಬೇಕು ಎಂದರು.ಕೋವಿಡ್-19 ಎಚ್ಚರಿಕೆಯ ಜೊತೆಗೆ ಶಾಲೆಯ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಬೇಕಿದೆ. ಮೂಲಭೂತ ಸೌಲಭ್ಯಗಳ ಆಧಾರದ ಮೇಲೆ ಶಾಲೆಗಳನ್ನು ಎಬಿಸಿಡಿ ಎಂದು ವರ್ಗೀಕರಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ವತಿಯಿಂದ ಶಾಲಾ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ಅವಕಾಶವಿದೆ. ಈ ಯೋಜನೆಯಡಿ ಶಾಲಾ ಕಾಂಪೌಂಡ್ ನಿರ್ಮಿಸಿಕೊಳ್ಳಬಹುದು. ಜೊತೆಗೆ ಜಲಜೀವನ್ ಮಿಷನ್ ವತಿಯಿಂದ ಎಲ್ಲಾ ಶಾಲೆಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಶಾಲೆಗಳಿಗೆ ಮೂಲಭೂತ ಸೌಲಭ್ಯಗಳು ಕಲ್ಪಿಸುವುದರಿಂದ ಶಾಲೆಗಳು ಸುಂದರವಾಗಿ ಕಾಣಲಿವೆ ಎಂದರು.
 ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆ ಅಗ್ರಸ್ಥಾನ ಅಲಂಕರಿಸಬೇಕು: ಜಿಲ್ಲೆಯಲ್ಲಿ ಈ ಬಾರಿಯ ಎಸ್‍ಎಸ್‍ಎಸ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ಮೊದಲ ಸ್ಥಾನ ಅಲಂಕರಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಶಿಕ್ಷಕರು, ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದರು. ವಿವಿಧ ಇಲಾಖೆಗಳ ಸಹಕಾರ ಅಗತ್ಯ: ಶಾಲೆಯ ಆರಂಭವಾದಾಗ ಶಿಕ್ಷಣ ಇಲಾಖೆಯೊಂದಿಗೆ ಇತರೆ ಇಲಾಖೆಗಳ ಸಹಕಾರ ಅಗತ್ಯವಾಗಿ ಬೇಕಾಗಿದೆ. ಗ್ರಾಮ ಪಂಚಾಯಿತಿ, ನಗರಸಭೆ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸಹಕಾರ ಅಗತ್ಯವಾಗಿ ಬೇಕಾಗಿದೆ ಎಂದರು.
 ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‍ಸಿ, ಸಿಆರ್‍ಪಿ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಗೆ ಮಾರ್ಗಸೂಚಿ ಪಾಲನೆ ಅಗತ್ಯ ಮಾಹಿತಿ ನೀಡಬೇಕು. ಶಾಲೆಯ ಪ್ರಾರಂಭದ ಒಂದು ವಾರದಲ್ಲಿ ಹೆಚ್ಚು ಗಮನ ನೀಡಬೇಕು ಎಂದು ಸೂಚಿಸಿದರು.
ಡಿಡಿಪಿಐ ರವಿಶಂಕರ್ ರೆಡ್ಡಿ ಮಾತನಾಡಿ, ಸರ್ಕಾರಿ ಶಾಲೆಯ ಶೇ.99 ರಷ್ಟು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಒಪ್ಪಿಗೆ ನೀಡಿದ್ದಾರೆ. ಕೋವಿಡ್-19 ಹಿನ್ನಲೆಯಲ್ಲಿ ಶಾಲೆಗಳಲ್ಲಿ ಎಸ್‍ಒಪಿ ಪಾಲನೆ ಕ್ರಮವಹಿಸಲಾಗಿದೆ ಎಂದರು.  
 ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಡಯಟ್ ಪ್ರಾಂಶುಪಾಲ ಎಸ್‍ಕೆಬಿ ಪ್ರಸಾದ್ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.