ಶಾಲೆ ಆರಂಭಕ್ಕೆ ತಜ್ಞರ ಶಿಫಾರಸು

ಬೆಂಗಳೂರು, ಜೂ. ೨೨- ರಾಜ್ಯದಲ್ಲಿ ಶಾಲೆಗಳನ್ನು ಪುನರ್ ಆರಂಭಿಸುವಂತೆ ತಜ್ಞರ ಉನ್ನತ ಮಟ್ಟದ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು ಶಾಲೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಒದಗಿಸುವಂತೆ ಸಲಹೆ ಮಾಡಿದೆ. ಈ ಸಮಿತಿಯ ಸಲಹೆಗಳನ್ನು ಆಧರಿಸಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಲೆಗಳ ಪುನಾರಾರಂಭದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಕೊರೊನಾ ಮೂರನೇ ಅಲೆಯ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲು ಖ್ಯಾತ ಹೃದ್ರೋಗ ತಜ್ಞ ಡಾ. ದೇವಿಪ್ರಸಾದ್‌ಶೆಟ್ಟೆ ನೇತೃತ್ವದ ಉನ್ನತ ಮಟ್ಟದ ಸಮಿತಿ ಶಾಲೆಗಳನ್ನು ಪುನರ್ ಆರಂಭಿಸುವಂತೆ ಶಿಫಾರಸ್ಸು ಮಾಡಿದೆ.
ಕೊರೊನಾ ೩ನೇ ಅಲೆ ನಿಯಂತ್ರಣ ಸಂಬಂಧ ಕೈಗೊಳ್ಳಬೇಕಾಗಿರುವ ಕ್ರಮಗಳು ಹಾಗೂ ಸಿದ್ದತೆಗಳ ಬಗ್ಗೆ ೯೧ ಪುಟಗಳ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಡಾ. ದೇವಿಪ್ರಸಾದ್‌ಶೆಟ್ಟಿ ಅವರು ಇಂದು ಸಲ್ಲಿಸಿದರು.
ಈ ಮಧ್ಯಂತರ ವರದಿಯಲ್ಲಿ ಶಾಲೆಗಳನ್ನು ಪುನರ್ ಆರಂಭಿಸುವ ಶಿಫಾರಸ್ಸನ್ನು ಮಾಡಲಾಗಿದೆ. ಶಾಲೆಗಳು ಕೊರೊನಾ ವೈರಸ್ ಹರಡುವ ತಾಣಗಳು ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ. ವಿಶ್ವದ ಯಾವುದೇ ದೇಶಗಳಲ್ಲಿ ಶಾಲೆಗಳು ಕೊರೊನಾ ವೈರಸ್ ಹರಡುವ ಹಬ್‌ಗಳಾಗಿರುವ ಉದಾಹರಣೆಗಳಿಲ್ಲ. ಹಾಗಾಗಿ ರಾಜ್ಯದಲ್ಲಿ ಶಾಲೆಗಳನ್ನು ಪುನಾರಾರಂಭಿಸಲು ಸೂಕ್ತ ಎಂದು ವರದಿಯಲ್ಲಿ ಹೇಳಲಾಗಿದೆ.
ಶಾಲೆಗಳ ಆರಂಭವನ್ನು ವಿಳಂಬ ಮಾಡುವುದು ಕೋವಿಡ್ ೧೯ ಗಿಂತ ಹಾನಿಕಾರಿ. ಹಾಗಾಗಿ ತಡ ಮಾಡದೆ ಶಾಲೆಗಳನ್ನು ಆರಂಭಿಸಿ ಮೊದಲಿಗೆ ಹಿರಿಯ ವಿದ್ಯಾರ್ಥಿಗಳಿಗೆ ಅಂದರೆ ಹೈಸ್ಕೂಲ್ ಹಾಗೂ ಪಿಯುಸಿ ಆರಂಭಿಸಿ ನಂತರ ಉಳಿದ ಕ್ಲಾಸ್‌ಗಳನ್ನು ಆರಂಭಿಸುವಂತೆಯೂ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.
ವಿಮೆಗೂ ಶಿಫಾರಸ್ಸು
ಶಾಲೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗಳಿಗೂ ೨ ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ಸರ್ಕಾರ ಒದಗಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಈ ವಿಮೆ ಜಾರಿಯಿಂದ ಪೋಷಕರು ತಮ್ಮ ಮಕ್ಕಳ ಶಾಲೆಗೆ ಕಳುಹಿಸಲು ಪ್ರೋತ್ಸಾಹ ನೀಡಲು ಸಾಧ್ಯ. ಹಾಗಾಗಿ ಶಾಲೆಗಳಿಗೆ ಹಾಜರಾಗುವ ಮಕ್ಕಳಿಗೆ ಆರೋಗ್ಯ ವಿಮೆ ನೀಡಬೇಕು ಎಂದು ವರದಿಯಲ್ಲಿ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.
ಶಾಲೆಗಳಲ್ಲಿ ಸಾಮಾಜಿಕ ಅಂತರ ಪಾಳಿಗಳ ಮೇಲೆ ತರಗತಿಗಳನ್ನು ನಡೆಸಬೇಕು. ಹಾಗೆಯೇ ಶಾಲೆಗಳು ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಬೇಕು ಎಂದು ಸಮಿತಿ ಹೇಳಿದೆ.
ತರಗತಿಗಳಿಗೆ ಹಾಜರಾಗುವುದರಿಂದ ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಅನುಕೂಲವಾಗುತ್ತದೆ. ದೈಹಿಕವಾಗಿಯೂ ಹಾಗೂ ಮಾನಸಿಕವಾಗಿಯೂ ವಿದ್ಯಾರ್ಥಿಗಳು ಸದೃಢಗೊಳ್ಳುತ್ತಾರೆ. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಮತ್ತಿತರ ಸಾಮಾಜಿಕ ಸಮಸ್ಯೆಗಳಿಗೆ ಮಕ್ಕಳು ಬಲಿಯಾಗುವುದನ್ನು ತಪ್ಪಿಸಲು ಶಾಲೆಗಳನ್ನು ಆರಂಭಿಸುವುದು ಸೂಕ್ತ ಎಂದು ತಜ್ಞರ ಅಭಿಪ್ರಾಯವಾಗಿದೆ.
ದೀರ್ಘ ಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳು ಶಾಲೆಗಳಿಗೆ ಹಾಜರಾಗಲು ವೈದ್ಯರ ಒಪ್ಪಿಗೆ ಅವಶ್ಯ ಎಂದು ಸಮಿತಿ ವರದಿ ಹೇಳಿದೆ.
ಸದ್ಯದಲ್ಲೇ ತೀರ್ಮಾನ
ತಜ್ಞರ ವರದಿ ಆಧರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲರೊಡನೆ ಚರ್ಚಿಸಿ, ಶಾಲೆ ಪುನಾರಾರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಹಾರೈಕೆ ಕೇಂದ್ರ
೩ನೇ ಅಲೆ ತಡಗಟ್ಟುವ ಸಂಬಂಧ ತಜ್ಞರ ಸಮಿತಿ ಹಲವು ಶಿಫಾರಸ್ಸು ಮಾಡಿದ್ದು ೩ನೇ ಅಲೆಯಲ್ಲಿ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಇದ್ದು, ಈ ಮಕ್ಕಳ ಚಿಕಿತ್ಸೆಗಾಗಿ ಪ್ರತಿ ಜಿಲ್ಲೆಯಲ್ಲೂ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಬೇಕು ಎಂದು ಶಿಫಾರಸ್ಸು ಮಾಡಿದೆ. ಹಾಗೆಯೇ ಕೊರೊನಾ ನಿಯಂತ್ರಣದಲ್ಲಿ ಬಿಗಿ ಕ್ರಮಗಳನ್ನು ಇನ್ನು ೪-೫ ತಿಂಗಳು ಕಾಲ ಮುಂದುವರಿಸುವಂತೆ ಸಮಿತಿ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಕೊರೊನಾ ತಡೆಗೆ ಲಸಿಕೆ ಪರಿಣಾಮಕಾರಿ ಹಾಗಾಗಿ ಆದಷ್ಟು ಶೀಘ್ರ ಎಲ್ಲರಿಗೂ ಲಸಿಕೆ ನೀಡುವಂತೆಯೂ ವರದಿಯಲ್ಲಿ ಹೇಳಲಾಗಿದೆ.

ತಜ್ಞರ ವರದಿಯಲ್ಲಿ ಪ್ರಮುಖ ಅಂಶಗಳು

 • ಶಾಲೆಗಳ ಪುನಾರಾರಂಭಕ್ಕೆ ಸರ್ಕಾರ ಸಮಿತಿ ಶಿಫಾರಸ್ಸು
 • ಪ್ರತಿ ವಿದ್ಯಾರ್ಥಿಗೆ ೨ ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ರಕ್ಷಣೆ ಶಿಫಾರಸ್ಸು
 • ಪೋಷಕರ ಒಪ್ಪಿದರೆ ಶಾಲೆಗೆ ಮಕ್ಕಳು
 • ಆನ್‌ಲೈನ್ ಆಫ್ ಲೈನ್ ತರಗತಿಗೂ ಶಿಫಾರಸು
 • ಮಕ್ಕಳಿಗಾಗಿ ಪ್ರತ್ಯೇಕ ಸಾರಿಗೆ
 • ಶಾಲಾ ಪರಿಸರದಲ್ಲಿ ತಿಂಡಿತಿನಿಸುಗಳ ಮಾರಾಟ ನಿಷೇಧ
 • ವಾರಕ್ಕೊಮ್ಮೆ ಸ್ಥಳೀಯ ವೈದ್ಯರಿಂದ ಮಕ್ಕಳ ಆರೋಗ್ಯ ತಪಾಸಣೆ
 • ಶಾಲಾ ಆರಂಭ ವಿಳಂಬ ಕೋವಿಡ್‌ಗಿಂತ ಹೆಚ್ಚು ಹಾನಿ ತರುತ್ತದೆ
 • ಮಕ್ಕಳ ದೈಹಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಶಾಲೆ ಆರಂಭ ಸೂಕ್ತ
 • ಶಾಲೆಗಳ ಆರಂಭದಿಂದ ಬಾಲ್ಯ ವಿವಾಹ, ಬಾಲ ಕಾರ್ಮಿಕರಾಗುವುದನ್ನು ತಪ್ಪಿಸಲು ಸಾಧ್ಯ
 • ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶಿಫ್ಟ್‌ಗಳ ತರಗತಿ ಆರಂಭಕ್ಕೂ ಸಲಹೆ
 • ಶಾಲೆಗಳಿಂದ ಕೊರೊನಾ ಹರಡುತ್ತದೆ ಎಂಬುದಕ್ಕೆ ಪುರಾವೆಯಿಲ್ಲ
 • ೩ನೇ ಅಲೆ ತಡೆಯಲು ಎಲ್ಲಾ ಜಿಲ್ಲೆಗಳಲ್ಲೂ ಮಕ್ಕಳ ಕೋವಿಡ್ ಹಾರೈಕೆ ಕೇಂದ್ರ ಸಲಹೆ
 • ೩ನೇ ಅಲೆ ಬರುವವರೆಗೂ ಕೊರೊನಾ ಬಿಗಿ ಕ್ರಮಗಳನ್ನು ಮುಂದುವರಿಸುವಂತೆ ಶಿಫಾರಸ್ಸು

ಶಾಲಾ- ಕಾಲೇಜು ಆರಂಭ ಸದ್ಯಕ್ಕಿಲ್ಲ ಬಿಎಸ್‌ವೈ
ರಾಜ್ಯದಲ್ಲಿ ಹಂತ ಹಂತವಾಗಿ ಶಾಲಾ -ಕಾಲೇಜನ್ನು ಆರಂಭಿಸಲು ತಜ್ಞರು ಸಲಹೆ ಮಾಡಿದ್ದಾರೆ. ಸದ್ಯಕ್ಕೆ ೧ ರಿಂದ ೧೦ನೇ ತರಗತಿಗಳನ್ನು ಆರಂಭಿಸುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಕೊರೊನಾ ೩ನೇ ಅಲೆ ನಿಯಂತ್ರಣ ಸಂಬಂಧ ರಚಿಸಲಾಗಿದ್ದ ಡಾ. ದೇವಿಪ್ರಸಾದ್‌ಶೆಟ್ಟಿ ನೇತೃತ್ವದ ತಜ್ಞರ ಮಧ್ಯಂತರ ವರದಿ ಸ್ವೀಕರಿಸಿ, ವರದಿಯ ಬಗ್ಗೆ ಚರ್ಚೆ ನಡೆಸಿದ ನಂತರ ತಮ್ಮ ಗೃಹ ಕಛೇರಿ ಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಯೋಚಿಸಿಲ್ಲ. ಆದರೆ ಪದವಿ, ಇಂಜನಿಯರಿಂಗ್, ವೈದ್ಯಕೀಯ ತರಗತಿಗಳನ್ನು ಆರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.
ಶಾಲೆಗಳನ್ನು ಆರಂಭಿಸುವ ಬಗ್ಗೆ ಚರ್ಚೆಗಳು ನಡೆದಿಲ್ಲ. ಸದ್ಯಕ್ಕೆ ೧ ರಿಂದ ೧೦ನೆ ತರಗತಿಗಳನ್ನು ಆರಂಭಿಸುವುದಿಲ್ಲ. ಎಲ್ಲಾ ಶಿಕ್ಷಕರಿಗೆ ಲಸಿಕೆ ನೀಡಬೇಕು ಹಾಗೆಯೇ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಬೇಕು ಎಂದರು.
೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿದ ನಂತರ ಕಾಲೇಜು ಪುನಾರಾರಂಭ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಕಾಲೇಜುಗಳನ್ನು ಆರಂಭಿಸುವ ಮುನ್ನ ಎಲ್ಲರಿಗೂ ಲಸಿಕೆ ನೀಡುವಂತೆಯೂ ಸಲಹೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ತೊಂದರೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಮಕ್ಕಳ ಆಸ್ಪತ್ರೆ, ಐಸಿಯು, ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಮಕ್ಕಳ ಆರೈಕೆ ಕೇಂದ್ರ ತೆರೆಯಲು ಶಿಪಾರಸು ಮಾಡಿದ್ದಾರೆ. ಹಾಗೆಯೇ ಆಕ್ಸಿಜಿನ್ ಕೊರತೆಯಾಗದಂತೆ ಗಮನ ಹರಿಸುವಂತೆ ಸಲಹೆ ಮಾಡಿದ್ದಾರೆ ಎಂದರು.
೩ನೇ ಅಲೆ ಸಂದರ್ಭದಲ್ಲಿ ವೈದ್ಯರು ಹಾಗೂ ದಾದಿಯರ ಕೊರತೆಯಾಗದಂತೆಯೂ ಎಚ್ಚರ ವಹಿಸಬೇಕು. ಕೋವಿಡ್ ಜೊತೆಗೆ ಇತರ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೂ ಸಲಹೆ ನೀಡಿದ್ದಾರೆ ಎಂದರು.