ಶಾಲೆಯ ಶುಭಾರಂಭ ಇಂದಿನಿಂದ ಶಾಲಾವರಣದಲ್ಲಿ ವಿದ್ಯಾಗಮ

ಹೊಸಪೇಟೆ ಜ 02 : ಕೋವಿಡ್ 19 ಸಾಂಕ್ರಾಮಿಕ ಹಿನ್ನಲೆಯಲ್ಲಿ ನಿರ್ಬಂಧಿಸಿದ್ದ ಶಾಲೆಗಳು ಇಂದಿನಿಂದ ಪುನಃ ತೆರೆದಿದ್ದು, ಶಿಕ್ಷಕರಲ್ಲಿ ಹಾಗೂ ಮಕ್ಕಳಲ್ಲಿ ಮಂದಹಾಸ ಮೂಡಿದೆ.
ನಗರದ ಗುಂಡ್ಲುವದ್ದಿಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ವಿದ್ಯಾರ್ಥಿಗಳನ್ನು ಶಾಲಾ ಸಿಬ್ಬಂದಿಗಳು ಆದರದಿಂದ ಬರಮಾಡಿಕೊಂಡರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮುಖ್ಯೋಪಾಧ್ಯಾರಾದ ಚಾರಿ ದುರ್ಗಪ್ಪ ಮಾತನಾಡಿ ಯಾವುದೇ ಆತಂಕಕ್ಕೆ ಒಳಪಡದೇ ಸುರಕ್ಷಾ ನಿಯಮಗಳನ್ನು ಪಾಲಿಸಿ ಶಾಲಾ ಆವರಣದಲ್ಲಿ ಇರಬೇಕು, ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು.
ಶಾಲೆಗೆ ಸ್ಯಾನಿಟೈಸೇಷನ್ ಮಾಡಿಸಲಾಗಿದ್ದು, ಇಂದಿನಿಂದ ಶಾಲಾ ಆವರಣದಲ್ಲಿ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮವನ್ನು ಮಾಡಲಾಗುತ್ತದೆ. 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಸದ್ಯ ಮನೆಯಲ್ಲಿರಲು ಸೂಚಿಸಿದ್ದು ಶಿಕ್ಷಕರೇ ಮನೆಮನೆಗೆ ತೆರಳಿ ಗೃಹಕಾರ್ಯ ಹಾಗೂ ಪಾಠಗಳ ಬೋಧನೆ ನೆರವೇರಿಸಲಾಗುತ್ತದೆ ಎಂದು ಶಾಲೆಯ ಸಿಬ್ಬಂದಿ ತಿಳಿಸಿದರು.
ಹೊಸವರ್ಷ ಹಿನ್ನಲೆಯಲ್ಲಿ ಕೇಕ್ ಕತ್ತರಿಸಿ ಮಕ್ಕಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕ ಹರೀಶ್ ಸೇರಿದಂತೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಸದಸ್ಯರು, ಶಾಲಾ ಸಿಬ್ಬಂದಿಗಳು ಇದ್ದರು.