ಎಂಪೊಂಡ್ವೆ (ಉಗಾಂಡಾ), ಜೂ.೧೭- ಪಶ್ಚಿಮ ಉಗಾಂಡಾದ ಎಂಪೊಂಡ್ವೆಯ ಲುಬಿರಿಹಾ ಮಾಧ್ಯಮಿಕ ಶಾಲೆಯ ಮೇಲೆ ಇಸ್ಲಾಮಿಕ್ ಸ್ಟೇಟ್ ಗುಂಪಿನೊಂದಿಗೆ ನಂಟು ಹೊಂದಿರುವ ಬಂಡುಕೋರರಿಂದ ನಡೆದ ದಾಳಿಯಲ್ಲಿ ಕನಿಷ್ಠ ೨೫ ಜನರು ಸಾವನ್ನಪ್ಪಿ, ಎಂಟಕ್ಕೂ ಹೆಚ್ಚು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಜೊತೆ ನಂಟು ಹೊಂದಿರುವ ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ (ಎಡಿಎಫ್) – ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್‌ಸಿ) ಮೂಲದ ಉಗಾಂಡಾದ ಗುಂಪು ನಡೆಸಿದೆ. ಸದ್ಯ ಡಿಆರ್‌ಸಿಯಲ್ಲಿ ವಿರುಂಗಾ ರಾಷ್ಟ್ರೀಯ ಉದ್ಯಾನವರದ ಕಡೆಗೆ ಓಡಿ ಹೋದ ಬಂಡುಕೋರರ ಗುಂಪನ್ನು ಸೇನಾಪಡೆ ಹಿಂಬಾಲಿಸುತ್ತಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಶಾಲೆಯಿಂದ ೨೫ ಶವಗಳನ್ನು ಪತ್ತೆಹಚ್ಚಲಾಗಿದ್ದು ಮತ್ತು ಬ್ವೆರಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ದಾಳಿಯಲ್ಲಿ ಶಾಲೆಯ ವಿದ್ಯಾರ್ಥಿ ನಿಲಯವನ್ನು ಸುಟ್ಟು ಹಾಕಲಾಗಿದ್ದು, ಆಹಾರದ ಅಂಗಡಿಯನ್ನು ಲೂಟಿ ಮಾಡಲಾಗಿದೆ ಎಂದು ರಾಷ್ಟ್ರೀಯ ಪೊಲೀಸ್ ವಕ್ತಾರ ಫ್ರೆಡ್ ಎನಗಾ ಅವರು ಶನಿವಾರ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಹಾಗೂ ಉಗಾಂಡಾದ ಗಡಿಯಿಂದ ಎರಡು ಕಿಲೋಮೀಟರ್ (೧.೨೫ ಮೈಲಿ) ಗಿಂತ ಕಡಿಮೆ ಇರುವ ಶಾಲೆಯ ಮೇಲಿನ ದಾಳಿಯು ಉಗಾಂಡಾದ ಶಾಲೆಯ ಮೇಲೆ ಹಲವು ವರ್ಷಗಳಿಂದ ನಡೆದ ಮೊದಲ ದಾಳಿಯಾಗಿದೆ. ಅಲ್ಲದೆ ಕಳೆದ ಎರಡು ದಶಕಗಳಿಂದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಇದ್ದುಕೊಂಡೇ ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ (ಎಡಿಎಫ್) ಬಂಡುಕೋರರು ದುಷ್ಟ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ.