ಶಾಲೆಯ ಆವರಣದ ವಿದ್ಯುತ್ ಕಂಬ ತೆರವಿಗೆಶಿಥಿಲಾವಸ್ಥೆ ಕೊಠಡಿ ನೆಲಸಮಕ್ಕೆ ಬಿಇಓರಿಂದ ಮನವಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 6 :- ಎರಡು ದಿನದ ಹಿಂದಷ್ಟೇ ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಮರದೇವರಗುಡ್ಡದ ಗೊಲ್ಲರಹಟ್ಟಿಯ ಎರಡನೇ ತರಗತಿ ವಿದ್ಯಾರ್ಥಿನಿ ಸೃಷ್ಠಿ ಮೃತಪಟ್ಟಿದ್ದು ಅವಳು ವ್ಯಾಸಂಗ ಮಾಡುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ವಿದ್ಯುತ್ ಕಂಬ ಅಪಾಯದ ಅವಘಡ ಸಂಭವಿಸುವ ಮುನ್ನ ತೆರವುಗೊಳಿಸುವಂತೆ ಹಾಗೂ ಗ್ರಾಮದ ಶಾಲೆಯ ಶಿಥಿಲಗೊಂಡ 4ಕೊಠಡಿಗಳನ್ನು ನೆಲಸಮಗೊಳಿಸಿ, ರಸ್ತೆಗೆ ಹಂಪ್ಸ್ ನಿರ್ಮಾಣ ಮಾಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಕೂಡ್ಲಿಗಿ ಪ್ರಭಾರಿ ಬಿಇಓ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಅಮರದೇವರಗುಡ್ಡ ಗೊಲ್ಲರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಬೆಳಿಗ್ಗೆ ಹೋಗುವಾಗ ರಸ್ತೆ ದಾಟುವ ಸಂದರ್ಭದಲ್ಲಿ ಲಘು ವಾಹನವೊಂದು ಡಿಕ್ಕಿಯಾದ ಪರಿಣಾಮ 2ನೇತರಗತಿ ವಿದ್ಯಾರ್ಥಿನಿ ಸೃಷ್ಠಿ ಸ್ಥಳದಲ್ಲೇ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೂಡ್ಲಿಗಿ ತಾಲೂಕು  ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಬಸವರಾಜ ಶಾಲೆಗೆ ಭೇಟಿ ನೀಡಿದ್ದು ಆ ಶಾಲೆಯಲ್ಲಿ 107 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಉಳಿದ ಮಕ್ಕಳಿಗೆ ಯಾವುದೇ ಅಪಾಯದ ಅವಘಡ ಸಂಭವಿಸಬಾರದು ಎಂದು ಶಾಲಾವಾರಣದಲ್ಲಿರುವ ವಿದ್ಯುತ್ ಕಂಬವನ್ನು ತ್ವರಿತವಾಗಿ ತೆರವುಗೊಳಿಸಬೇಕೆಂದು ಕೂಡ್ಲಿಗಿ ಜೆಸ್ಕಾಂನ ಎಇಇ ಗೆ ಪತ್ರ ರವಾನಿಸಿದ್ದಾರೆ ಮತ್ತು ಶಾಲೆಯ ಮಕ್ಕಳು ರಸ್ತೆ ದಾಟುವಾಗ ಅಪಘಾತ ಆಗದಂತೆ ಅದರ ನಿಯಂತ್ರಣಕ್ಕೆ ರಸ್ತೆಗೆ ಹಂಪ್ಸ್ ಹಾಕಿ ಮತ್ತು ಗ್ರಾಮದ ಶಾಲೆಯ ಶಿಥಿಲಗೊಂಡ 4ಕೊಠಡಿಗಳಿಂದ ಮಕ್ಕಳ ರಕ್ಷಣೆ ಅರಿತು ಅವುಗಳನ್ನು ನೆಲಸಮಗೊಳಿಸುವಂತೆ ಪಿಡಬ್ಯು ಡಿ ಅಧಿಕಾರಿಗಳಿಗೆ ಕೂಡ್ಲಿಗಿ ತಾಲೂಕು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಪತ್ರದ ಮೂಲಕ ಮನವಿ ಮಾಡಿದ್ದಾರೆ.