ಶಾಲೆಯಲ್ಲಿ ಶೂಟೌಟ್: ೭ಮಂದಿ ಸಾವು

ಕರಾಚಿ, ಮೇ ೫- ಅಮೆರಿಕಾ ಹಾಗೂ ಯುರೋಪ್‌ನಲ್ಲಿ ಸಾಮಾನ್ಯವಾಗಿರುವ ಶೂಟೌಟ್ ಪ್ರಕರಣಗಳು ಇದೀಗ ಪಾಕಿಸ್ತಾನದಲ್ಲೂ ನಡೆಯಲು ಆರಂಭಿಸಿದೆ. ಪಾಕಿಸ್ತಾನದ ವಾಯುವ್ಯ ಕುರ್ರಂ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದ ಶೂಟೌಟ್‌ನಲ್ಲಿ ಕೆಲವು ಶಿಕ್ಷಕರು ಸೇರಿದಂತೆ ಕನಿಷ್ಠ ಏಳು ಜನರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಸರ್ಕಾರಿ ಪ್ರೌಢಶಾಲೆ ತಾರಿ ಮಂಗಲ್‌ನ ಸಿಬ್ಬಂದಿ ಕೊಠಡಿಯಲ್ಲಿ ನಡೆದ ಘಟನೆಯಲ್ಲಿ ಅನೇಕ ಬಂದೂಕುಧಾರಿಗಳು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಗ್ರಾಮೀಣ ಪ್ರದೇಶವಾದ ಕುರ್ರಂ ಜಿಲ್ಲೆಯ ಶಾಲೆಯಲ್ಲಿ ಗುಂಡಿನ ದಾಳಿ ಹೇಗೆ ನಡೆಯಿತು ಎಂಬುದರ ನಿಖರ ಮಾಹಿತಿ ಹಾಗೂ ವಿವರಗಳು ಕುರಿತು ಇನ್ನೂ ಸ್ಪಷ್ಟವಾಗಿಲ್ಲ. ಮೂಲಗಳ ಪ್ರಕಾರ, ಕುರ್ರಂ ಜಿಲ್ಲೆಯಲ್ಲಿ ನಡೆದ ಮತ್ತೊಂದು ಶೂಟೌಟ್‌ನಲ್ಲಿ ವ್ಯಕ್ತಿಯೊಬ್ಬನನ್ನು ಕಾರ್‌ನಲ್ಲೇ ಗುಂಡಿಕ್ಕಿ ಹತ್ಯೆ ನಡೆಸಲಾಗಿತ್ತು. ಮೃತ ವ್ಯಕ್ತಿ ಅದೇ ಶಾಲೆಯ ಸದಸ್ಯ ಎಂದೇ ಹೇಳಲಾಗಿತ್ತು. ಇದಕ್ಕೆ ಪ್ರತಿಯಾಗಿ ಮತ್ತೊಂದು ಗುಂಪು ತಾರಿ ಮಂಗಲ್ ಎಂಬ ಸಣ್ಣ ಪಟ್ಟಣದ ಶಾಲೆಯನ್ನು ಸುತ್ತುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಏಳು ಜನರು ಕೊಲ್ಲಲ್ಪಟ್ಟರು, ಅವರಲ್ಲಿ ಕನಿಷ್ಠ ನಾಲ್ವರು ಶಿಕ್ಷಕರು, ಮತ್ತು ಇಬ್ಬರು ಸಹಾಯಕ ಸಿಬ್ಬಂದಿಯಾಗಿದ್ದಾರೆ. ಪೊಲೀಸರ ಮೇಲೂ ದಾಳಿ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ. ಮೃತರ ದೇಹಗಳು ಇನ್ನೂ ಪತ್ತೆಯಾಗಿಲ್ಲ.