ಶಾಲೆಯಲ್ಲಿ ರೋಟರಿ ಶುದ್ಧ ನೀರಿನ ಘಟಕ ಸ್ಥಾಪನೆ

ಕೊರಟಗೆರೆ, ಏ. ೧೦- ಇತ್ತೀಚಿನ ಕಲುಷಿತ ವಾತಾವರಣದಲ್ಲಿ ಶಾಲಾ ಮಕ್ಕಳ ಆರೋಗ್ಯ ದೃಷ್ಠಿಯಿಂದ ಉತ್ತಮ ಶುದ್ಧ ಕುಡಿಯುವ ನೀರು ಅನಿವಾರ್ಯವಾಗಿದ್ದು, ಬೆಂಗಳೂರು ಪೀಣ್ಯ ರೋಟರಿ ಕ್ಲಬ್ ವತಿಯಿಂದ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ರೋಟರಿ ಸದಸ್ಯ ರುದ್ರಯ್ಯ ತಿಳಿಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ೪೭೫ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಶುದ್ದ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಆಧುನಿಕ ಕಲುಷಿತ ಪ್ರಪಂಚದಲ್ಲಿ ಶುದ್ದ ಕುಡಿಯುವ ನೀರಿನ ಬಳಕೆ ಅನಿವಾರ್ಯವಾಗಿದೆ. ಅಶುದ್ದ ನೀರು ಹಲವಾರು ರೋಗಗಳಿಗೆ ಕಾರಣವಾಗಿದ್ದು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿದ್ದು, ಇದನ್ನು ಹೋಗಲಾಡಿಸುವ ಹಿನ್ನೆಲೆಯಲ್ಲಿ ಕಾಲೇಜಿನ ಉಪ ಪ್ರಾಚಾರ್ಯರಾದ ಎನ್. ಚೈತ್ರರವರ ಮನವಿಯ ಮೇರೆಗೆ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ೪೭೫ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಮಧುಗಿರಿ ಶೈಕ್ಷಣಿಕ ಜಿಲ್ಲಾ ಉಪನಿದೇರ್ಶಕ ರೇವಣ್ಣಸಿದ್ದಪ್ಪ ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯ ದೃಷ್ಠಿಯಿಂದ ರೋಟರಿ ಕ್ಲಬ್ ಸರ್ಕಾರ ನೀಡುವ ಸವಲತ್ತಿನೊಂದಿಗೆ ಸಮಾಜಿಕ ಸೇವೆ ಮಾಡುತ್ತಿರುವುದು ಶ್ಲಾಘನೀಯ. ರೋಟರಿ ಸಂಸ್ಥೆಯ ಈ ಸೇವೆಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಉಪ ಪ್ರಾಚಾರ್ಯ ಎನ್. ಚೈತ್ರ ಮಾತನಾಡಿ, ರೋಟರಿ ಸದಸ್ಯರಾದ ರುದ್ರಯ್ಯ ನವರು ಮೂಲತಃ ಕೊರಟಗೆರೆ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದವರಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ತಮ್ಮ ಗ್ರಾಮವಾದ ತಿಮ್ಮಸಂದ್ರ ಸೇರಿದಂತೆ ಸುತ್ತಮುತ್ತಲ ಶಾಲೆಗಳಿಗೆ ಇ ಕಲಿಕಾ ಉಪಕರಣಗಳು, ಶುದ್ಧ ಕುಡಿಯವ ನೀರಿನ ಘಟಕ, ಆಧುನಿಕ ಶೌಚಾಲಯ ನಿರ್ಮಾಣ, ನಿಘಂಟುಗಳ ವಿತರಣೆ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ಒದಗಿಸಿದ್ದು, ನಮ್ಮ ಮನವಿಯ ಮೇರೆಗೆ ಪಟ್ಟಣದ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಮಧುಸೂದನ್, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್, ಬಿಆರ್‍ಸಿ ಸುರೇಂದ್ರನಾಥ್, ಶಿಕ್ಷಕರಾದ ಜಿ.ವಿ. ಗೋವಿಂದರಾಜು, ಶಿವಕುಮಾರ್, ಮಂಜುಳಾದೇವಿ ಮತ್ತಿತರರು ಉಪಸ್ಥಿತರಿದ್ದರು.