
ಫ್ನೊಮ್ ಪೆನ್ (ಕಾಂಬೋಡಿಯಾ), ಆ.೧೪- ಹಿಂದಿನ ಯುದ್ದದ ಸಮಯದಲ್ಲಿ ಬಚ್ಚಿಡಲಾಗಿದ್ದ ಭಾರೀ ಪ್ರಮಾಣದ ಸ್ಫೋಟಕ ಹಾಗೂ ಲ್ಯಾಂಡ್ ಮೈನ್‌ನಂಥ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಶಾಲೆಯೊಂದನ್ನು ತಾತ್ಕಾಲಿಕ ಅವಧಿಗೆ ಮುಚ್ಚಿಸಲಾಗಿರುವ ಘಟನೆ ಈಶಾನ್ಯ ಕಾಂಬೋಡಿಯಾದಲ್ಲಿ ನಡೆದಿದೆ.
೪೮ ವರ್ಷಗಳ ಹಿಂದೆ ವಿಶ್ವದ ಅತೀ ಭೀಕರ ನಾಗರಿಕ ಯುದ್ದಗಳಿಗೆ ಕಾರಣಗಳಿಗೆ ಕಾಂಬೋಡಿಯಾದಲ್ಲಿ ಭಾರೀ ಪ್ರಮಾಣದಲ್ಲಿ ರಕ್ತಪಾತವೇ ನಡೆದಿದೆ. ಅದೂ ಅಲ್ಲದೆ ಯುದ್ದದ ಸಮಯದಲ್ಲಿ ದೇಶದ ಹೆಚ್ಚಿನ ಕಡೆಗಳಲ್ಲಿ ಲ್ಯಾಂಡ್ ಮೈನ್ ಹಾಕಲಾಗಿದ್ದು, ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಸದ್ಯ ಈಶಾನ್ಯ ಕಾಂಬೋಡಿಯಾದ ಕ್ವೀನ್ ಕೊಸೊಮಾಕ್ ಹೈಸ್ಕೂಲ್‌ನಲ್ಲಿ ಭಾರೀ ಪ್ರಮಾಣದ ಲ್ಯಾಂಡ್ ಮೈನ್‌ಗಳು ಪತ್ತೆಯಾಗಿದೆ. ಯುದ್ದದ ಅವಧಿಯಲ್ಲಿ ಇದೇ ಕ್ವೀನ್ ಕೊಸೊಮಾಕ್ ಹೈಸ್ಕೂಲ್ ಅನ್ನು ಮಿಲಿಟರಿ ಕೇಂದ್ರವಾಗಿ ಬಳಸಲಾಗುತ್ತಿತ್ತು ಎನ್ನಲಾಗಿದೆ. ಸದ್ಯ ಶಾಲೆಯ ಆವರಣದಲ್ಲಿ ಟನ್‌ಗಳಷ್ಟು ತುಕ್ಕು ಹಿಡಿದ ಸ್ಫೋಟಕಗಳನ್ನು ಸಾಲುಗಳಲ್ಲಿ ಅಂದವಾಗಿ ಜೋಡಿಸಿಡಲಾಗಿದ್ದು, ತೋರಿಸುತ್ತವೆ, ಅವುಗಳಲ್ಲಿ ಗ್ರೆನೇಡ್‌ಗಳು ಮತ್ತು ಟ್ಯಾಂಕರ್ ವಿರೋಧಿ ಲಾಂಚರ್‌ಗಳು ಇವೆ. ಒಟ್ಟಾರೆಯಾಗಿ ಮೂರು ದಿನಗಳಲ್ಲಿ ೨,೦೦೦ ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಲಾಗಿದೆ. ಶಾಲಾ ಉದ್ಯಾನವನವನ್ನು ವಿಸ್ತರಿಸುವ ಇರಾದೆಯಲ್ಲಿ ನೆಲವನ್ನು ಸಮತಟ್ಟು ಮಾಡಲಾಗುತ್ತಿದ್ದ ಸಮಯದಲ್ಲಿ ಯುದ್ಧಸಾಮಗ್ರಿಗಳು ಪತ್ತೆಯಾಗಿದ್ದು, ಒಂದು ವೇಳೆ ಇಡೀ ಶಾಲೆಯನ್ನು ತೆರವುಗೊಳಿಸಿದರೆ, ಇನ್ನೂ ಹೆಚ್ಚಿನ ಶಸ್ತ್ರಾಸ್ತ್ರಗಳು ಲಭಿಸುವ ಸಾಧ್ಯತೆಯಿದೆ ಎಂದು ಕಾಂಬೋಡಿಯನ್ ಮೈನ್ ಆಕ್ಷನ್ ಸೆಂಟರ್‌ನ ಮಹಾನಿರ್ದೇಶಕ ಹೆಂಗ್ ರತನ ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು. ಈ ಸ್ಫೋಟಕ ಸಾಧನಗಳನ್ನು ಯಾರಾದರೂ ನೆಲವನ್ನು ಅಗೆದು ಹೊಡೆದರೆ ಸ್ಫೋಟಿಸುವುದು ಸುಲಭ. ಈ ಅಪಾಯಕಾರಿ ಸ್ಥಿತಿಯ ಹಿನ್ನೆಲೆಯಲ್ಲಿ ಸ್ಫೋಟಕಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವವರೆಗೂ ಮಕ್ಕಳು ಶಾಲೆಗೆ ಬಾರದಂತೆ ಸೂಚಿಸಲಾಗಿದೆ ಎನ್ನಲಾಗಿದೆ.