ಶಾಲೆಗೆ ಹೋಗಲು ದಾರಿ ವ್ಯವಸ್ಥೆಗೆ ವಿದ್ಯಾರ್ಥಿನಿ ಮನವಿ

ಸಿರಾ, ನ. ೨೪- ಸರ್, ನಾನು ನಮ್ಮ ಶಾಲೆಗೆ ದಿನವೂ ಹೊಲದಲ್ಲಿ ಹೋಗಬೇಕಿದೆ. ಹೋಗುವಾಗ, ಬರುವಾಗ ಕಲ್ಲುಮುಳ್ಳು ಚುಚ್ಚುತ್ತವೆ. ಆದ್ದರಿಂದ ಶಾಲೆಗೆ ದಾರಿ ವ್ಯವಸ್ಥೆ ಮಾಡಿಕೊಡಿ ಪ್ಲೀಸ್ ಎಂದು ವಿದ್ಯಾರ್ಥಿನಿ ಸ್ನೇಹ ಅಧಿಕಾರಿಗಳಿಗೆ ಮನವಿ ಮಾಡಿದರು.
ತಾಲ್ಲೂಕಿನ ನೇರಲಗುಡ್ಡ ಗ್ರಾಮ ಪಂಚಾಯ್ತಿಯಿಂದ ಏರ್ಪಡಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಎಸ್.ಎನ್. ತಾಂಡಾ ಶಾಲೆಯ ೪ನೇ ತರಗತಿ ವಿದ್ಯಾರ್ಥಿನಿ ಸ್ನೇಹ ಹಾಜರಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಂದೆ ಸಮಸ್ಯೆಗಳ ಅನಾವರಣ ಮಾಡಿದಳು.
ಪಿಡಿಒ ಬರ್ಕತ್ ಅಲಿ ಮಾತನಾಡಿ, ಶಾಲೆಗೆ ದಾನ ನೀಡಿದ ಸ್ಥಳದಲ್ಲಿ ಶಾಲೆ ನಿರ್ಮಿಸಲಾಗಿದೆ. ಶಾಲೆಗೆ ಹೋಗಲು ಅಕ್ಕಪಕ್ಕದ ಜಮೀನಿನವರು ದಾರಿ ನೀಡುತ್ತಿಲ್ಲ. ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು ಅಕ್ಕಪಕ್ಕದ ಜಮೀನಿನ ಮಾಲೀಕರೊಂದಿಗೆ ಚರ್ಚಿಸಿ, ಅವರ ಮನವೊಲಿಸುವ ಮೂಲಕ ದಾರಿ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದರು.
ಗಾಣದಹುಣಸೆ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ ಎಂ. ಪಲ್ಲವಿ, ನಮ್ಮ ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಇದ್ದಿಲು ಸುಡಲು, ಕೋಳಿ ಫಾರಂನಲ್ಲಿ ಕೆಲಸ ಮಾಡುವ ಹಾಗೂ ಚಿಂದಿ ಸಂಗ್ರಹಿಸುವ ಕುಟುಂಬಗಳು ಬಂದು ನೆಲೆಸುತ್ತವೆ. ಅವರ ಮಕ್ಕಳು ಶಾಲೆಗೆ ಹೋಗದೆ ಭವಿಷ್ಯ ಹಾಳಾಗುತ್ತಿದೆ. ಅವರನ್ನು ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳಿ ಎಂದು ಗಮನ ಸೆಳೆದಳು.
ನೇರಲಗುಡ್ಡ ಕ್ಲಸ್ಟರ್‌ನ ವಿವಿಧ ಶಾಲೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಶೌಚಾಲಯ ವ್ಯವಸ್ಥೆ, ಕೊಠಡಿ ದುರಸ್ಥಿ, ಕಾಂಪೌಂಡ್ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಬೀದಿದೀಪ ಸರಿಪಡಿಸುವುದು, ಚರಂಡಿ ವ್ಯವಸ್ಥೆ, ಅಂಗನವಾಡಿ ಕೇಂದ್ರಗಳಿಗೆ ನಿವೇಶನ, ಕೊಠಡಿ ನಿರ್ಮಾಣ ಹೀಗೆ ಸಮಸ್ಯೆಗಳನ್ನು ಪಂಚಾಯ್ತಿ ವ್ಯಾಪ್ತಿಯ ಅಧಿಕಾರಿಗಳ ಮುಂದೆ ಹೇಳಿಕೊಂಡರು.
ಈ ಎಲ್ಲಾ ಸಮಸ್ಯೆಗಳನ್ನೂ ಸಹನೆಯಿಂದಲೇ ಆಲಿಸಿದ ಪಿಡಿಒ, ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷೆ ಹಾಗೂ ಸದಸ್ಯರು ನಿಗದಿತ ಕಾಲಮಿತಿಯೊಳಗೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಸಿಎಂಸಿಎ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಮಂಜುನಾಥ್ ಮಾತನಾಡಿ, ಮಕ್ಕಳ ಸಮಸ್ಯೆಗಳಿಗೆ ಎಲ್ಲರೂ ಧ್ವನಿಯಾಗಬೇಕು ಎಂದು ಮಕ್ಕಳ ಗ್ರಾಮ ಸಭೆ ನಡೆಸಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಯಣ್ಣ, ಉಪಾಧ್ಯಕ್ಷೆ ಭಾಗ್ಯವತಿ, ಸದಸ್ಯರಾದ ಜಯಲಕ್ಷ್ಮೀ, ಲತಾ, ನರಸಿಂಹಮೂರ್ತಿ, ತಾವರೇನಾಯ್ಕ, ಮೂರ್ತಿ ನಾಯ್ಕ, ಪಂಚಾಯಿತಿ ಕಾರ್ಯದರ್ಶಿ ಜಗನ್ನಾಥ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಾಂಡುರಂಗಪ್ಪ, ಮುಖ್ಯ ಶಿಕ್ಷಕರಾದ ವೆಂಕಟೇಶ್, ಬಿ. ಚಂದ್ರಪ್ಪ, ಎಸ್. ನಾಗೇಶ್, ಉಮೇಶ್, ಶ್ರೀನಿವಾಸ್, ಜಿ.ಓ. ಸವಿತಾ, ನೀತಾ ದತ್ತು ಮಾಳಿ, ನವೀನ್ ಕುಮಾರ್, ಸಿ.ಆರ್. ಲಕ್ಷ್ಮೀಪತಿ, ಓಬಣ್ಣ ಮತ್ತಿತರರು ಉಪಸ್ಥಿತರಿದ್ದರು.