ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ಪ್ರತಿ ದಿನ 100 ರೂ.:ಅಸ್ಸಾಂ ಸರ್ಕಾರ

ಅಸ್ಸಾಂ, ಜ.4-ಅಸ್ಸಾಂ ಸರ್ಕಾರ ಬಾಲಕಿಯರಿಗೆ ಶಾಲೆಗೆ ತೆರಳಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಶಾಲೆಗೆ ಹಾಜರಾಗುವ ವಿದ್ಯಾರ್ಥಿನಿಯರಿಗೆ ಪ್ರತಿ ದಿನ ತಲಾ 100 ರೂ.ಪ್ರೋತ್ಸಾಹಧನ ನೀಡಲಿದೆ‌ ಎಂದು ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮ‌ ತಿಳಿಸಿದ್ದಾರೆ.

ಅವರಿಂದು‌ ಶಿವಸಾಗರ್ ಎಂಬಲ್ಲಿ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿನಿಯರಿಗೆ ಸರಕಾರದಿಂದ ದ್ವಿಚಕ್ರವಾಹನ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದ ಪದವಿ ಹಾಗೂ ಸ್ನಾತ್ತಕೋತ್ತರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಪ್ರತಿ ವರ್ಷದ ಜನವರಿ ಅಂತ್ಯದೊಳಗೆ ಸರ್ಕಾರ ಕ್ರಮವಾಗಿ ತಲಾ 1,500 ರೂ. ಹಾಗೂ ರೂ 2,000 ಜಮೆ ಮಾಡಲಿದ್ದು, ಇದನ್ನು ಬಳಸಿ ವಿದ್ಯಾರ್ಥಿಗಳು ಪುಸ್ತಕ ಖರೀದಿಸಬಹುದಾಗಿದೆ ಎಂದರು.

ಮುಂದಿನ ವರ್ಷಗಳಲ್ಲಿ ಒಂದು ಲಕ್ಷ ವಿದ್ಯಾರ್ಥಿನಿಯರು 12ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡರೂ ಸರಕಾರ ಅವರಿಗೆ ದ್ವಿಚಕ್ರ ವಾಹನ ನೀಡಲಿದೆ ಎಂದು ಸಚಿವರು ಹೇಳಿದರು.