ಶಾಲೆಗೆ ಬರದಿದ್ದರೂ ಹಾಜರಾತಿ
ಇದು ಮಿಲ್ಲರ್ ಪೇಟೆ ಸರ್ಕಾರಿ ಶಾಲೆಯ ಪದ್ದತಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,31- ಸಾಮಾನ್ಯವಾಗಿ ಶಾಲೆಗೆ ಹೋದರೆ ಮಾತ್ರ ಅಟೆಂಡೆನ್ಸ್ ಸಿಗುತ್ತೆ ಮಕ್ಕಳಿಗೆ ಆದರೆ, ಹೋಗದಿದ್ದರೂ ಅಟೆಂಡೆನ್ಸ್ ಸಿಗುವ ಅದೂ ಸರ್ಕಾರಿ ಶಾಲೆಯೊಂದು ನಗರದಲ್ಲಿದೆ. ಅದುವೇ
ನಗರದ ಮಿಲ್ಲರ್‍ಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ. ಮಕ್ಕಳು ಶಾಲೆಗೆ ಹೋಗದಿದ್ದರೂ ಹಾಜರಾತಿ ಹಾಕುವ ಪದ್ದತಿ ಇಲ್ಲಿನ ಶಿಕ್ಷಕರದ್ದಾಗಿದೆ.
ಶಾಲೆಗೆಯಲ್ಲಿ ಅಡ್ಮಿಷನ್ ಪಡೆದಮಕ್ಕಳು ಸತತವಾಗಿ 7 ದಿನ ಗೈರು ಹಾಜರಾದರೆ ಅಂತಹ ಮಗುವನ್ನು ಮನೆಗೆ ಹೋಗಿ ಕರೆತರುವ ಜವಾಬ್ದಾರಿ ಶಿಕ್ಷಕರದ್ದು. ಅದಕ್ಕಾಗಿ ಇಲ್ಲಿನ ಬುದ್ದಿವಂತ ಶಿಕ್ಷಕರು ಶಾಲೆಗೆ ಬಾರದ ಮಕ್ಕಳಿಗೆ ಐದು ಹಜರಾತಿ ಕೊಡುವುದು ನಂತರ ನಾಲ್ಕು ದಿನ ಗೈರು ಮಾಡುವುದು. ಮತ್ತೆ ನಾಲ್ಕು ದಿನ ಹಾಜರಾತಿ ಕೊಡುವುದು ಆರು ದಿನ ಗೈರು ಮಾಡಿರುವುದು ಬೆಳಕಿಗೆ ಬಂದಿದೆ.
ಶಾಲೆಯಲ್ಲಿ ಗೈರು ಮನೆಗೆಲಸದಲ್ಲಿ ಹಾಜರ್:
ತಂದೆ ಮಾಡಿದ್ದ ಸಾಲಕ್ಕೆ ಕಳೆದ ಎರಡು ವರ್ಷಗಳಿಂದ ಮನೆಗೆಲಸದಲ್ಲಿ ತೊಡಗಿರುವ 15 ಮತ್ತು  13 ವರ್ಷದ ಇಬ್ಬರು ಮಕ್ಕಳು ನಗರದ ಮಿಲ್ಲರ್‍ಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತ್ರ ಹಾಜರಾಗಿದ್ದಾರೆ. ಈ ಮಕ್ಕಳು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬಿತ್ಯಾದಿ ಮಾಹಿತಿ ಕಲೆಹಾಕಬೇಕಿದ್ದ ಶಾಲೆಯ ಶಿಕ್ಷಕರು, ಅಟೆಂಡೆನ್ಸ್‍ನಲ್ಲಿ  ಶಾಲೆಗೆ ಬಂದಂತೆ ಹಾಜರು ಹಾಕಿ ಕೈತೊಳೆದುಕೊಂಡಿದ್ದಾರೆ. ಈ ಮಾಹಿತಿ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗೆ ಲಭ್ಯವಾಗಿದೆ. ಈ ಕುರಿತು ಸಂಬಂಧಪಟ್ಟ ಶಾಲೆಯ ಶಿಕ್ಷಕರು, ಮುಖ್ಯಶಿಕ್ಷಕರು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ವರದಿಯನ್ನು ಜಿಲ್ಲಾಧಿಕಾರಿ ಮತ್ತು ಮಕ್ಕಳ ರಕ್ಷಣಾ ಆಯೋಗಕ್ಕೆ ಸಲ್ಲಿಸಲಾಗಿದೆಯಂತೆ.
ಮಕ್ಕಳನ್ನು ಕೂಲಿಗೆ:
ತಂದೆ ಮಾಡಿದ್ದ ಸಾಲಕ್ಕೆ ಅಪ್ರಾಪ್ತ ಮಕ್ಕಳನ್ನು ಮನೆಕೆಲಸಕ್ಕೆ ಇಟ್ಟುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪರಿಶೀಲನೆಗೆ ತೆರಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಜಾನಾಯ್ಕ್, ಸಿಡಿಪಿಒ ನಾಗರಾಜ್, ಕಾರ್ಮಿಕ ಅಧಿಕಾರಿಗಳು, ಬಾಲಕಾರ್ಮಿಕ ಅಧಿಕಾರಿಗಳ ತಂಡಕ್ಕೆ ಮತ್ತಷ್ಟು ಮನಕಲಕುವ ಮಾಹಿತಿಗಳು ಲಭ್ಯವಾಗಿವೆ.
ಆರೋಪಿ ದಾದಾವಲಿ ತಂದೆ ನಾಗರಾಜ್ ಮಾಡಿದ್ದ 50 ಸಾವಿರ ರೂ. ಸಾಲಕ್ಕೆ ಆತನ ಅಪ್ರಾಪ್ತ ಮೂವರು ಮಕ್ಕಳನ್ನು ಮನೆಗೆಲಸಕ್ಕೆ ಇಟ್ಟುಕೊಂಡಿದ್ದ ದಾದಾವಲಿ ಅವರು, ತಮ್ಮ ಮನೆಯಲ್ಲಿ ಮಾತ್ರವಲ್ಲ ಬೇರೆಯವರ ಮನೆಗಳಿಗೂ ಕೆಲಸಕ್ಕೆ ಕಳುಹಿಸಿದ್ದಾರೆ. ಬಂದ ಕೂಲಿ ಹಣವನ್ನು ತಾವೇ ಪಡೆದಿದ್ದಾರೆ.
ತಮ್ಮ ಮನೆಯಲ್ಲಿ ಮಾಡಿದ್ದ ಕೆಲಸವನ್ನು ಮಕ್ಕಳಿಗೆ ನೀಡಿದ್ದ ಊಟಕ್ಕೆ ಸರಿಪಡಿಸಿ, ಬೇರೆಯವರ ಮನೆಗಳಲ್ಲಿ ಮಾಡಿದ್ದ ಕೆಲಸದಿಂದ ಬಂದಿದ್ದ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದರು. ಅವರು ಹೇಳಿದಂತೆ ಕೇಳದಿದ್ದಾಗ ಮಕ್ಕಳಿಗೆ ಹೊಡೆದಿದ್ದು, ಮಕ್ಕಳ ಮೈಮೇಲೆ ಸುಟ್ಟ ಗಾಯಗಳು ಕಂಡುಬಂದಿವೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗೆಲಸಕ್ಕೆ ಇದ್ದ ಮೂವರು ಮಕ್ಕಳನ್ನು ರಕ್ಷಿಸಿರುವ ಅಧಿಕಾರಿಗಳು, ಮಕ್ಕಳನ್ನು ಕಿರಿಯ ಬಾಲಮಂದಿರದಲ್ಲಿ ವಾಸ್ತವ್ಯ ಕಲ್ಪಿಸಿದ್ದಾರೆ. ತಾಯಿ ಅನಿತಾ ಮತ್ತು ಐದು ವರ್ಷದ ಮಗುವನ್ನು ಸಖಿ ಕೇಂದ್ರದಲ್ಲಿ ಆಪ್ತ ಸಮಾಲೋಚನೆ ಮಾಡಲಾಗುತ್ತಿದೆ. ಜತೆಗೆ ವೈದ್ಯಕೀಯ ಸೌಲಭ್ಯವನ್ನು ಸಹ ನೀಡಲಾಗುತ್ತಿದೆ. ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡ ಹಿನ್ನೆಲೆಯಲ್ಲಿ ದಾದಾವಲಿ ಸೇರಿ ನಾಲ್ವರ ವಿರುದ್ಧ ಬ್ರೂಸ್‍ಪೇಟೆ ಠಾಣೆಯಲ್ಲಿ ಜಾತಿನಿಂದನೆ, ಬಾಲಕಾರ್ಮಿಕ ಸೇರಿ ಇರುವ ಎಲ್ಲ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆಯಂತೆ.

ಮಕ್ಕಳು ಗೈರಾಗಿದ್ದರೂ ಶಾಲೆಯಲ್ಲಿ ಹಾಜರ್ ಹಾಕಿರುವುದು, ಬೇರೆಯವರ ಮನೆಗೂ ಮನೆಗೆಲಸಕ್ಕೆ ಕಳುಹಿಸಿರುವುದು, ಒಡೆದಿರುವುದು ಇನ್ನಿತರೆ ಮಾಹಿತಿಗಳು ಲಭ್ಯವಾಗಿವೆ. ಈ ಕುರಿತು ಇರುವ ಎಲ್ಲ ಸೆಕ್ಷನ್‍ಗಳಡಿ ಪ್ರಕರಣ ದಾಖಲಾಗಿದ್ದು, ಜಿಲ್ಲಾಧಿಕಾರಿ, ಮಕ್ಕಳ ಆಯೋಗ ಸೇರಿ ಸೇರಿ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ ವರದಿಯನ್ನು ಕಳುಹಿಸಿಕೊಡಲಾಗಿದೆ.
ವಿಜಯಕುಮಾರ್
ಉಪನಿರ್ದೇಶಕರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಳ್ಳಾರಿ.