
ಯಾದಗಿರಿ : ಜು.14 : ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಶ್ರೀ ಸಾಹೀಲ್ ಅಹ್ಮದ್ ಎಸ್. ಕುನ್ನಿಭಾವಿ ಅವರು ಯಾದಗಿರಿ ನಗರದ ” ಕನ್ನಡ ಮಾದರಿ ಶಾಲೆ” ಮತ್ತು “ಉರ್ದು ಹಿರಿಯ ಪ್ರಾರ್ಥಮಿಕ ಶಾಲೆ” ಸ್ಟೇಷನ್ ಏರಿಯಾ ಯಾದಗಿರಿ ಶಾಲೆಗಳಿಗೆ ಇಂದು ದಿಢೀರನೆ ಭೇಟಿ ನೀಡಿದರು. ತಮ್ಮ ಭೇಟಿಯಲ್ಲಿ ಸದರಿ ಶಾಲೆಗಳ ಅವಸ್ಥೆ ಕಂಡು ಅಚ್ಚರಿಯಾದರು.
ಈ ಶಾಲೆಯ ಒಂದನೇ ಮಹಡಿಯ ಕಟ್ಟಡ ನಿರ್ಮಾಣವಾಗಿ ಕೇವಲ 15-20 ವರ್ಷಗಳಾಗಿದ್ದು, ಸದರಿ ಕಟ್ಟಡವು ತಕ್ಷಣ ಬೀಳುವಂತಹ ಪರಿಸ್ಥಿತಿಯಲ್ಲಿ ಇದೆ. ಈಗಾಗಲೇ ಸದರಿ ಕಟ್ಟಡ ಕಾಮಗಾರಿಯ ಬಗ್ಗೆ ಎ.ಸಿ.ಬಿ ಅಧಿಕಾರಿಗಳಿಗೆ ವಿಚಾರಣೆಗಾಗಿ ದೂರನ್ನು ನೀಡಲಾಗಿದೆ.
ಈ ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ, ಎಲ್ಲಾ ಕಟ್ಟಡವು ಮಳೆಯಿಂದ ಸೋರುತ್ತಿದ್ದು, ಅದೇ ವ್ಯವಸ್ಥೆಯಲ್ಲಿ ಮಕ್ಕಳು ವಿದ್ಯಾಭಾಸ ಮಾಡುತ್ತಿದ್ದಾರೆ. 1 ರಿಂದ 4ನೇ ತರಗತಿಯ ಮಕ್ಕಳು ನೆಲದ ಮೇಲೆ ಕುಳಿತುಕೊಂಡು ಕಲಿಯುತ್ತಿದ್ದಾರೆ. ಮಕ್ಕಳಿಗೆ ಸುಮಾರು ಮೂರು ವರ್ಷದಿಂದ ಸಮವಸ್ತ್ರ ನೀಡಿರುವುದಿಲ್ಲ. ಸುಮಾರು 600 ಮಕ್ಕಳು ಸದರಿ ಶಾಲೆಗಳಲ್ಲಿ ವಿದ್ಯಾಭಾಸ ಮಾಡುತ್ತಿದ್ದು, ಮಕ್ಕಳಿಗೆ ಶಾಲಾ ಕೊಠಡಿಗಳು ಇರುವುದಿಲ್ಲ. ಶಾಲೆಯ ಕಂಪೌಂಡ ಒಳಗೆ ಕಸವನ್ನು ಸಹ ಅಕ್ಕ-ಪಕ್ಕದ ಅಂಗಡಿ ಮಾಲೀಕರು ಸುರಿತ್ತಿರುವುದು ಕಂಡುಬಂದಿತ್ತು. ಕೆಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಕರೆದುಕೊಂಡು ಹೋಗಿದ್ದಾರೆಂದು ತಿಳಿದುಬಂತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.