ಶಾಲೆಗಳ ಬಂದ್ ನಿರ್ಧಾರ ಇಲ್ಲ

ತುಮಕೂರು, ನ. ೨೯- ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸದ್ಯಕ್ಕೆ ಶಾಲೆಗಳನ್ನು ಬಂದ್ ಮಾಡುವ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇಂದಿಲ್ಲಿ ತಿಳಿಸಿದರು.
ರಾಜ್ಯದಲ್ಲಿ ಒಂದು ವೇಳೆ ಕೋವಿಡ್ ಸೋಂಕು ಹೆಚ್ಚಾದರೆ ತಾಂತ್ರಿಕ ಸಲಹಾ ಸಮಿತಿ ನಿರ್ಧಾರದ ಮೇಲೆ ಶಾಲೆಗಳನ್ನು ಮುಚ್ಚುವ ತೀರ್ಮಾನ ಮಾಡಲಾಗುವುದು. ಸದ್ಯಕ್ಕಂತೂ ಆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದರು.
ಕೋವಿಡ್ ವಿಚಾರವಾಗಿ ತಾಂತ್ರಿಕ ಸಲಹಾ ಸಮಿತಿ ನೀಡುವ ನಿರ್ಧಾರವನ್ನು ಸ್ವೀಕರಿಸಿ ಆ ನಂತರ ಶಾಲೆಗಳನ್ನು ಏನು ಕ್ರಮ ಜಾರಿಗೊಳಿಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ ಈವರೆಗೂ ತಾಂತ್ರಿಕ ಸಮಿತಿ ಯಾವುದೇ ಗಾಬರಿ ವರದಿ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕೆಲವು ಕಡೆ ಶಾಲೆಗಳಲ್ಲಿ ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸರ್ಕಾರ ಸಂಪೂರ್ಣ ಜವಾಬ್ದಾರಿಯಿಂದ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪೋಷಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವುದು ಬೇಡ ಎಂದರು.
ಸರ್ಕಾರ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಅರ್ಧ ಗಂಟೆಗೊಮ್ಮೆ ಎಲ್ಲ ಡಿಡಿಪಿಐಗಳಿಂದ ಮಾಹಿತಿ ಪಡೆಯುತ್ತಿದ್ದೇವೆ ಎಂದು ಅವರು ಹೇಳಿದರು.
ಶಾಲೆಗಳಿಗೆ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು. ಈ ಬಗ್ಗೆ ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಜತೆಗೆ ಶಾಲಾ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡುವ ಕುರಿತು ಸಹ ಆದೇಶಿಸಲಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಸರ್ಕಾರವೂ ಕಾಳಜಿ ವಹಿಸಿದೆ. ವಿನಾ ಕಾರಣ ಪೋಷಕರು ಗಾಬರಿಯಾಗುವುದು ಬೇಡ ಎಂದರು.