ಶಾಲೆಗಳ ಬಂದ್‌ಗೆ ಸರ್ಕಾರ ಚಿಂತನೆ

ಬೆಂಗಳೂರು, ಡಿ. ೬- ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾದರೆ ಶಾಲಾ-ಕಾಲೇಜುಗಳು ಬಂದ್ ಆಗಲಿವೆ. ಬೆಂಗಳೂರಿನಲ್ಲಿಂದ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದು ಸ್ವಲ್ಪ ಆತಂಕ ತಂದಿದೆ. ಹಾಗಾಗಿ, ಸೋಂಕು ಹೆಚ್ಚಾದರೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡುವ ಚಿಂತನೆ ಇದೆ. ಪೋಷಕರು ಯಾವುದೇ ಆತಂಕ ಬೇಡ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಕೋವಿಡ್ ಸ್ಥಿತಿಗತಿಯ ಬಗ್ಗೆ ಪ್ರತಿದಿನ ತಜ್ಞರಿಂದ ವರದಿ ಪಡೆದುಕೊಳ್ಳುತ್ತಿದ್ದೇವೆ, ವರದಿ ಪ್ರಕಾರ ಸದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಅಕಸ್ಮಾತ್ ಸೋಂಕು ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡುವುದಕ್ಕೂ ನಾವು ಸಿದ್ಧರಿದ್ದೇವೆ ಎಂದರು. ಇಂದು ಅಧಿಕಾರಿಗಳ ಜತೆ ಸಭೆ ನಡೆಸಿ ಕೋವಿಡ್ ಮಾರ್ಗಸೂಚಿಗಳನ್ನು ಬಿಗಿಯಾಗಿ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಪೋಷಕರು ಯಾವುದೇ ರೀತಿಯ ಆತಂಕಪಡುವುದು ಬೇಡ, ಶಾಲೆಗಳಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ. ಪರೀಕ್ಷಾ ಸಂದರ್ಭದಲ್ಲೂ ದೈಹಿಕ ಅಂತರ ಕಾಪಾಡಲು ಕ್ರಮಕೈಗೊಂಡಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಸೋಂಕಿನ ಸ್ಥಿತಿಗತಿಗಳನ್ನು ನೋಡಿಕೊಂಡು ಶಾಲೆಗಳನ್ನು ಬಂದ್ ಮಾಡಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಮಾಡುವುದಾಗಿ ಹೇಳಿದರು.
ರಾಜ್ಯದ ನವೋದಯ ಹಾಗೂ ವಸತಿ ಶಾಲೆಗಳಲ್ಲಿ ಸೋಂಕು ಕಂಡು ಬರುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಸೋಂಕು ಇದುವರೆಗೂ ವರದಿಯಾಗಿಲ್ಲ ಎಂದವರು ಹೇಳಿದರು.
ಸೋಂಕು ಕಾಣಿಸಿಕೊಳ್ಳುತ್ತಿರುವ ನವೋದಯ ಮತ್ತು ವಸತಿ ಶಾಲೆಗಳಲ್ಲಿ ಸೋಂಕು ತಡೆಗೆ ಅಗತ್ಯ ಕ್ರಮಕೈಗೊಳ್ಳುತ್ತೇವೆ. ಸೋಂಕಿಗೆ ಒಳಗಾಗಿರುವ ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ. ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಇಬ್ಬರು ಶಿಕ್ಷಕರಿಗೂ ಸೋಂಕು ದೃಢಪಟ್ಟಿದೆ. ಯಾವುದೇ ಸಮಸ್ಯೆ ಇಲ್ಲ ಅತಂಕ ಬೇಡ ಎಂದರು.
ಕೊರೊನಾ ಸೋಂಕು ಕಾಣಿಸಿಕೊಂಡಿರುವ ವಸತಿ ಮತ್ತು ನವೋದಯ ಶಾಲೆಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿಯನ್ನು ಪರಿಶೀಲಿಸುವುದಾಗಿ ಅವರು ಹೇಳಿದರು.
ವಸತಿ ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳು ಪಾಲನೆಯಾಗುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ಖುದ್ದು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಫೆಬ್ರವರಿ ಅಂತ್ಯದ ವೇಳೆಗೆ ತುಸು ಕೋವಿಡ್ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಆ ವೇಳೆಗೆ ಮಕ್ಕಳಿಗೆ ಬರುವ ಸಾಧ್ಯತೆಯೂ ಇದೆ ಎಂದು ಅವರು ತಿಳಿಸಿದರು.
ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸಕಾರ ಎಲ್ಲ ಬೆಳವಣಿಗೆಗಳ ಮೇಲೂ ನಿಗಾ ಇಟ್ಟಿದೆ. ರೂಪಾಂತರಿ ತಳಿ
ಒಮಿಕ್ರಾನ್‌ನ್ನು ತಡೆಗಟ್ಟಲು ಕ್ರಮಕೈಗೊಂಡಿದೆ. ಅಗತ್ಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದರು.
ರಾಜ್ಯದ ಧಾರವಾಡದ ಎಸ್‌ಬಿಎಂ ಕಾಲೇಜಿನ ಹಲವು ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿತ್ತು. ನಿನ್ನೆಯಷ್ಟೇ ಚಿಕ್ಕಮಗಳೂರಿನ ವಸತಿ ಶಾಲೆಯಲ್ಲೂ ಸುಮರು ೨೦ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ಹೋಗುವ ಮಕ್ಕಳ ಪೋಷಕರಲ್ಲಿ ಆತಂಕ ಮನೆ ಮಾಡಿತ್ತು. ಈ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಎಲ್ಲ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.

ಹೊಸ ವರ್ಷ ಕ್ರಿಸ್‌ಮಸ್ ಆಚರಣೆಗೂ ನಿರ್ಬಂಧ
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಕ್ರಿಸ್‌ಮಸ್ ಮತ್ತು ಹೊಸ ವರ್ಷ ಸಂಭ್ರಮಾಚರಣೆಗೆ ನಿಬಂಧ ವಿಧಿಸುವ ಸಾಧ್ಯತೆಗಳು ಹೆಚ್ಚಿವೆ.
ರಾಜ್ಯದಲ್ಲಿ ಕೆಲ ದಿನಗಳಿಂದ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಂದೇ ವಾರದಲ್ಲಿ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಜತೆಗೆ ಕೊರೊನಾ ವೈರಸ್‌ನ ರೂಪಾಂತರಿ ತಳಿ ಒಮಿಕ್ರಾನ್‌ನ ಎರಡೂ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿರುವುದರಿಂದ ಸೋಂಕು ತಡೆಯಲು ಸರ್ಕಾರ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಗೆ ನಿಬಂಧ ಹೇರುವ ಸಾಧ್ಯತೆಗಳು ಹೆಚ್ಚಿವೆ.