ಶಾಲೆಗಳು ಪುನರಾರಂಭ : ಮಕ್ಕಳ ಸ್ವಾಗತಕ್ಕೆ ಶಾಲೆಗಳಲ್ಲಿ ಅಗತ್ಯ ಸಿದ್ಧತೆಜಿಪಂ ಸಿಇಒ ರಾಹುಲ್ ಶಿಂಧೆ ಮನವಿ.

ವಿಜಯಪುರ: ಮೇ.21:2023-24ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 31 ರಿಂದ ಪ್ರಾರಂಭವಾಗುತ್ತಿದ್ದು,ಶಾಲಾ ಕೊಠಡಿ ಹಾಗೂ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಎಲ್ಲಾ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ 3,345 ಶಾಲೆಗಳಲ್ಲಿ 5.28 ಲಕ್ಷ ಮಕ್ಕಳಿದ್ದು, ಶಾಲೆಗಳನ್ನು ಅಲಂಕರಿಸಿ ಮಕ್ಕಳನ್ನು ಸ್ವಾಗತಿಸಲು ಕ್ರಮ ವಹಿಸಲಾಗಿದೆ. ಎಲ್ಲ ಮಕ್ಕಳಿಗೂ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಣೆ ಮಾಡಲು ಸಹ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಾರ್ವಜನಿಕರಲ್ಲಿ ಮನವಿ:
2023-24ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದಲ್ಲಿ ಜಿಲ್ಲೆಯಲ್ಲಿ ಎಲ್ಲ ಸಾರ್ವಜನಿಕರು ಭಾಗಿಯಾಗಿ ತಮ್ಮ ನೆರೆಹೊರೆಯ ಎಲ್ಲ ಅರ್ಹ ಮಕ್ಕಳನ್ನು ಶಾಲೆಗೆ ಕರೆ ತರುವಲ್ಲಿ ಕೈ ಜೋಡಿಸಿ, ಜಿಲ್ಲೆಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಹಕರಿಸಲು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.ಪೆÇೀಷಕರಲ್ಲಿ ಮನವಿ:
ಶಾಲಾ ಪ್ರಾರಂಭೋತ್ಸವ ನಿಟ್ಟಿನಲ್ಲಿ ಗ್ರಾಮಗಳಲ್ಲಿನ ಅರ್ಹ ಮಕ್ಕಳು ಶಾಲೆಗೆ ಹಾಜರಾಗುವಂತೆ ಸ್ಥಳೀಯ ಸಂಸ್ಥೆಗಳ ಮೂಲಕ ಡಂಗೂರ ಸಾರುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ. ಅಂಗನವಾಡಿಯಲ್ಲಿರುವ ಮಕ್ಕಳ ಪಾಲಕರನ್ನು ಭೇಟಿ ಮಾಡಿ ಶಾಲೆಗೆ ದಾಖಲಿಸಿಕೊಳ್ಳಲು ಶಿಕ್ಷಕರ ಮೂಲಕ ಕ್ರಮ ವಹಿಸಲು ಈಗಾಗಲೇ ಉಪ ನಿರ್ದೇಶಕರು ಶಾಲಾ ಶಿಕ್ಷಣ, ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಕ್ಷೇತ್ರ ಸಮನ್ವಯಾಧಿಕಾರಿಗಳಿಗೆ ತಿಳಿಸಿದ್ದಾರೆ.
ಬಿಸಿ ಊಟ ಆರಂಭ:
ಶಾಲಾ ಆರಂಭದ ದಿನ ಶಾಲೆಗೆ ಆಗಮಿಸುವ ಎಲ್ಲ ಮಕ್ಕಳಿಗೆ ಬಿಸಿ ಊಟದ ಜೊತೆಗೆ ಸಿಹಿ ಊಟದ ಮೂಲಕ ಕಲಿಕಾ ಪ್ರೇರಣಾ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು .
ಸ್ಥಳೀಯ ಸಂಸ್ಥೆಯ ಸಹಕಾರದೊಂದಿಗೆ ದಾಖಲಾತಿ ಆಂದೋಲನ:
ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತಿ ಮತ್ತು ನಗರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ಸಹಕಾರದೊಂದಿಗೆ ಶಾಲಾ ಪ್ರಾರಂಭೋತ್ಸವದಂದು ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿ, ಮಕ್ಕಳನ್ನು ಸ್ವಾಗತಿಸಲು, ಪ್ರತಿ ಮನೆ-ಮನೆಗೆ ತೆರಳಿ ಎಲ್ಲ ಅರ್ಹ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ದಾಖಲಿಸುವಂತೆ ಸ್ಥಳೀಯ ಸಂಸ್ಥೆಯ ಸಹಕಾರದೊಂದಿಗೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.