ಶಾಲೆಗಳಿಗೆ 12.61ಲಕ್ಷ ಪುಸ್ತಕಗಳ ಪೂರೈಕೆ ಅಗತ್ಯ ಕ್ರಮ

ಕೋಲಾರ,ಮೇ,೧೬:ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಾದ ಪಠ್ಯಪುಸ್ತಕಗಳನ್ನು ಬೇಸಿಗೆ ರಜೆಗೆ ಮುನ್ನವೇ ಶಾಲೆಗಳಿಗೆ ತಲುಪಿಸುವ ಐತಿಹಾಸಿಕ ಕ್ರಮ ಕೈಗೊಂಡಿದ್ದು, ಈಗಾಗಲೇ ಶೇ.೯೮ ರಷ್ಟು ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.
ಮೇ.೨೯ ರಿಂದ ಶೈಕ್ಷಣಿಕ ವರ್ಷ ಪ್ರಾರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪಠ್ಯ ಪುಸ್ತಕಗಳ ಸರಬರಾಜು ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಜಿಲ್ಲೆಯ ಸರ್ಕಾರಿ,ಅನುದಾನಿತ,ಖಾಸಗಿ ಶಾಲೆಗಳಿಂದ ಸ್ಟೂಡೆಂಟ್ ಟ್ರ್ಯಾಕಿಂಗ್ ಸಿಸ್ಟಮ್(ಸ್ಯಾಟ್ಸ್) ಆಧರಿಸಿ ೧೩,೦೧೬೪೮ ಪುಸ್ತಕಗಳಿಗೆ ಇಂಡೆಂಟ್ ನೀಡಲಾಗಿತ್ತು ಎಂದ ಅವರು, ಇದರಲ್ಲಿ ೧೨,೬೧೫೭೪ ಪುಸ್ತಕಗಳು ಸರಬರಾಜಾಗಿವೆ ಎಂದು ತಿಳಿಸಿದರು.
ಹಿಂದಿನ ವರ್ಷಗಳಲ್ಲಿ ಶಾಲೆಗಳು ಆರಂಭವಾಗುವ ಸಂದರ್ಭದಲ್ಲಿ ಪುಸ್ತಕಗಳ ಸರಬರಾಜು ನಡೆಯುತ್ತಿತ್ತು ಎಂದ ಅವರು, ಇದರಿಂದ ಅನೇಕ ಕಡೆಗಳಲ್ಲಿ ಸಕಾಲಕ್ಕೆ ಪುಸ್ತಕಗಳು ಸರಬರಾಜಾಗುತ್ತಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿತ್ತು ಎಂದರು.
ಈ ಶೈಕ್ಷಣಿಕ ವರ್ಷ ಮುಗಿಯುವ ಮುನ್ನವೇ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಾದ ಪಠ್ಯಪುಸ್ತಕಗಳನ್ನು ಸರ್ಕಾರ ಒದಗಿಸಿದ್ದು, ಶಾಲೆಗಳಿಗೆ ತಲುಪಿಸುವ ಕೆಲಸವನ್ನು ಆಯಾ ಶಿಕ್ಷಣ ಸಂಯೋಜಕರ ನೇತೃತ್ವದಲ್ಲಿ ಮಾಡಲಾಗಿದೆ ಎಂದ ಅವರು, ಮುಂದಿನ ಶೈಕ್ಷಣಿಕ ವರ್ಷದ ಆರಂಭದ ದಿನವೇ ಮಕ್ಕಳ ಕೈಗೆ ಪುಸ್ತಕ ತಲುಪಲಿದೆ ಎಂದು ತಿಳಿಸಿದರು.
ಶಾಲೆ ಆರಂಭವಾಗಿ ಎರಡು ಮೂರು ತಿಂಗಳಾದರೂ ಪಠ್ಯಪುಸ್ತಕ ಇನ್ನೂ ತಲುಪಿಲ್ಲ ಎಂಬ ಅನೇಕ ದೂರುಗಳಿದ್ದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಪಠ್ಯಪುಸ್ತಕಗಳ ಉಸ್ತುವಾರಿ ನೋಡಲ್ ಅಧಿಕಾರಿ ಪಿ.ವಿ.ಗಾಯತ್ರಿ ಮಾತನಾಡಿ ೨ನೇ ತರಗತಿಯ ನಲಿಕಲಿ ಪುಸ್ತಕಗಳು, ೧ನೇ ತರಗತಿಯ ಉರ್ದು ನಲಿಕಲಿ, ಉರ್ದು,ಗಣಿತ, ಇವಿಎಸ್ ಪುಸ್ತಕಗಳು ಮಾತ್ರ ಇನ್ನೂ ಬರಬೇಕಿದ್ದು, ಅವು ಸಹಾ ಈ ವಾರದಲ್ಲೇ ಪೂರೈಕೆಯಾಗಲಿದೆ ಎಂದು ತಿಳಿಸಿದರು.
ಇತಿಹಾಸದಲ್ಲೇ ಮೊದಲ ಬಾರಿಗೆ ಬೇಸಿಗೆ ರಜೆಗೂ ಮುನ್ನಾ ಪುಸ್ತಕ ಸರಬರಾಜಿಗೆ ಕೈಗೊಂಡ ಕ್ರಮವಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸ್ಯಾಟ್ಸ್ ಅಥವಾ ಸ್ಟುಡೆಂಟ್ಸ್ ಟ್ರ್ಯಾಕಿಂಗ್ ಸಿಸ್ಟಮ್ ಮೂಲಕ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳಿಗೆ ಪಠ್ಯಪುಸ್ತಕಗಳು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಮತ್ತು ಮಕ್ಕಳ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೂ ಬೇಡಿಕೆಗೆ ತಕ್ಕಂತೆ ಪುಸ್ತಕಗಳ ದಾಸ್ತಾನು ಮಾಡಲಾಗಿದೆ, ಯಾವುದೇ ಶಾಲೆಗೆ ಕೊರತೆಯಾಗದಂತೆ ಅಗತ್ಯ ಕ್ರಮವಹಿಸಿರುವುದಾಗಿ ತಿಳಿಸಿದರು.
ಅವರು, ಈ ಬಾರಿ ಪುಸ್ತಕ ಸಾಗಾಣಿಕೆ, ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಲಾಗಿದೆ ಎಂದ ಅವರು, ಆಯಾ ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳಿಗೆ ಆ ವ್ಯಾಪ್ತಿಯ ಎಲ್ಲಾ ಸರ್ಕಾರಿ,ಅನುದಾನಿತ,ಕಿರಿಯ,ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಿದ್ದೇವೆ. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಆಯಾ ಶಾಲೆಯ ಮುಖ್ಯಶಿಕ್ಷಕರನ್ನು ಸಂಪರ್ಕಿಸಿ ಪುಸ್ತಕಗಳನ್ನು ಶಾಲೆಗೆ ತಲುಪಿಸಲು ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.