ಕಲಬುರಗಿ,ಸೆ.22: ರಾಜ್ಯ ಸರ್ಕಾರವು 2023-2024ನೇ ಸಾಲಿಗೆ ಅನ್ವಯಿಸುವಂತೆ ಮಾನದಂಡಗಳನ್ನು ಪಾಲಿಸುವ ವಿಚಾರದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಮಾನ್ಯತೆ ನವೀಕರಿಸಲು ಅವಕಾಶ ನೀಡಿದ ಇಲಾಖೆಯ ಕ್ರಮ ಸ್ವಾಗತಾರ್ಹ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ತಿಳಿಸಿದ್ದಾರೆ.
ಖಾಸಗಿ ಶಾಲೆಗಳಿಗೆ ಮಾನ್ಯತೆ ನೀಡಲು ಶಿಕ್ಷಣ ಇಲಾಖೆ ನಿಗದಿಪಡಿಸಿದ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ, ಭೂ ಪರಿವರ್ತನೆ ಮತ್ತಿತರ ಕಠಿಣ ಮಾನದಂಡಗಳನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ ಎಂದು ಅವರು ಹೇಳಿಕೆಯಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ವರ್ಷ ಮುಚ್ಚಳಿಕೆ ಪತ್ರ ಬರೆಸಿಕೊಂಡು ಈ ವರ್ಷದ ಮಟ್ಟಿಗೆ ಮಾನ್ಯತೆ ನವೀಕರಿಸಲು ಇಲಾಖೆ ತೀರ್ಮಾನಸಿದೆ. ಇದರಿಂದಾಗಿ ನಮ್ಮ ಬೇಡಿಕೆಗೆ ಇಲಾಖೆ ತಾತ್ಕಾಲಿಕವಾಗಿ ಪರಿಹಾರ ನೀಡಿದೆ. ಆದಾಗ್ಯೂ, ಇದು ಸಾಲದು, ಶಾಶ್ವತವಾಗಿ ಹಳೆಯ ಶಾಲೆಗಳಿಗೆ ಈ ನಿಯಮವನ್ನು ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಸಂಬಂಧ ನಾನು ಶಿಕ್ಷಣ ಸಚಿವರಿಗೆ ಖುದ್ದಾಗಿ ಭೇಟಿ ಮಾಡಿ ಶಿಕ್ಷಣ ಸಂಸ್ಥೆಗಳ ಪರವಾಗಿ ವಿನಂತಿಸಿದ್ದೆ. ಅದಕ್ಕೆ ಅವರು ಸ್ಪಂದಿಸಿ ಇಲಾಖೆಗೆ ಸೂಚನೆ ನೀಡಿದ್ದರು. ಅದರಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಶಾಲಾ ಮಾನ್ಯತೆ ನವೀಕರಣಕ್ಕಾಗಿ ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆ ಪ್ರಮಾಣಪತ್ರ ಸಲ್ಲಿಸಬೇಕು. ಶಾಲೆ ನಡೆಯುತ್ತಿರುವ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ ಎಂಬಿತ್ಯಾದಿ ಮಾನದಂಡಗಳನ್ನು ಹೊಸ ಖಾಸಗಿ ಶಾಲೆಗಳಿಗೆ ಮಾನ್ಯತೆ ನೀಡಲು ಹಾಗೂ ಹಳೆಯ ಶಾಲೆಗಳಿಗೆ ಮಾನ್ಯತೆ ನವೀಕರಣ ಕಡ್ಡಾಯಗೋಲಿಸಿತ್ತು. ಆದಾಗ್ಯೂ, ಇಂತಹ ಕಠಿಣ ನಿಯಮಗಳನ್ನು ಹಳೆಯ ಶಾಲೆಗಳು ಪಾಲಿಸಲು ಸಾಧ್ಯವೇ ಇರಲಿಲ್ಲ. ಹಾಗಾಗಿ ಅನೇಕ ಶಾಲೆಯ ಆಡಳಿತ ಮಂಡಳಿಯವರು ನನಗೆ ಭೇಟಿ ಮಾಡಿ ನಾವು ನಿಯಮ ಪಾಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶಾಲೆಗಳನ್ನು ಮುಚ್ಚಬೇಕಾದ ಅನಿವಾರ್ಯತೆ ಇದೆ ಎಂದು ಮನವಿ ಮಾಡಿದ್ದರು. ಹಾಗಾಗಿ ಸಚಿವರೊಂದಿಗೆ ಚರ್ಚೆ ಮಾಡಿದ್ದೆ ಎಂದು ನಮೋಶಿ ಅವರು ತಿಳಿಸಿದ್ದಾರೆ.
ಈಗ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ 2023-2024ನೇ ಸಾಲಿಗೆ ಅನ್ವಯಿಸುವಂತೆ ಮಾನದಂಡಗಳನ್ನು ಪಾಲಿಸುವ ವಿಚಾರದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಮಾನ್ಯತೆ ನವೀಕರಿಸಲು ಅವಕಾಶ ನೀಡಿದ ಇಲಾಖೆ ಕ್ರಮವನ್ನು ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ.