ಶಾಲೆಗಳಿಗೆ ಬಾರದ ಸಮವಸ್ತ್ರಗಳು ಪಠ್ಯಪುಸ್ತಕಗಳು

ವಿಜಯಪುರ.ಮೇ೩೧: ಸರಕಾರಿ ಶಾಲೆಗಳು ಬುಧವಾರದಿಂದ ಪ್ರಾರಂಭಗೊಂಡಿದ್ದರೂ, ಅಧಿಕೃತವಾಗಿ ಮಕ್ಕಳಿಗೆ ಶುಕ್ರವಾರದಿಂದ ಶಾಲೆಗಳು ಪ್ರಾರಂಭವಾಗಲಿದ್ದು, ಅಂದು ತಳಿರು, ತೋರಣಗಳೊಂದಿಗೆ ಹೂಗಳನ್ನು ನೀಡಿ, ಸಿಹಿ ಊಟ ಮಾಡಿಸುವ ಮೂಲಕ ಶಾಲೆ ಪ್ರಾರಂಭಗೊಳ್ಳಲಿದ್ದು, ಅಂದು ಎಲ್ಲಾ ಮಕ್ಕಳುಗಳಿಗೂ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಪೂರೈಸಬೇಕಾಗಿದ್ದು, ಸರ್ಕಾರ ಈಗಾಗಲೇ ಎಲ್ಲಾ ಶಾಲೆಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಪೂರೈಸಲಾಗಿದೆ ಎಂದು ತಿಳಿಸಿರುವುದು ಕೇವಲ ಪೊಳ್ಳು ಭರವಸೆಯಾಗಿದ್ದು, ಈ ಹಂತದವರೆಗೂ ಎಲ್ಲಾ ಶಾಲೆಗಳಿಗೂ ಅವಶ್ಯಕ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಪೂರೈಸಲಾಗದಿರುವುದು ದುರ್ದೈವದ ಸಂಗತಿಯಾಗಿದೆ.
ಪಟ್ಟಣದ ಹಲವಾರು ಶಾಲೆಗಳಲ್ಲಿ ಎರಡು ಜೊತೆ ಸಮವಸ್ತ್ರಗಳ ಬದಲು ಒಂದು ಜೊತೆ ಸಮವಸ್ತ್ರಕ್ಕೆ ಆಗುವಷ್ಟು ಬಟ್ಟೆಗಳು ಬಂದಿದ್ದು, ಆರು ಹಾಗೂ ಏಳನೇ ತರಗತಿಗಳ ಮಕ್ಕಳಿಗೆ ಸಮವಸ್ತ್ರಗಳು ಬದಲಾವಣೆಯಾಗಿದ್ದು, ಅದಕ್ಕೆ ತಕ್ಕಂತೆ ಬಟ್ಟೆಗಳು ಬಂದಿಲ್ಲ. ಒಂದು ಹಾಗೂ ಎರಡನೇ ತರಗತಿ ಪಠ್ಯಪುಸ್ತಕಗಳು ಬಂದಿದ್ದರೆ ಆರು ಹಾಗು ಏಳನೇ ತರಗತಿ ಪಠ್ಯಪುಸ್ತಕಗಳು ಸರಿಯಾಗಿ ಲಭ್ಯವಿರುವುದಿಲ್ಲ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಬಹಳಷ್ಟು ಪಠ್ಯಪುಸ್ತಕಗಳು ಸಹ ಶಾಲೆಗಳಿಗೆ ಸರಬರಾಜು ಆಗಿರುವುದಿಲ್ಲ.
ಬಹಳಷ್ಟು ಶಾಲೆಗಳಲ್ಲಿ ಬಲಾಢ್ಯವಾಗಿರುವ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳು ಇದರ ಬಗ್ಗೆ ಮಾತುಕತೆ ನಡೆಸಿ, ಅವಶ್ಯಕ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ಪಡೆದುಕೊಂಡಿದ್ದರೆ, ದುರ್ಬಲ ಮುಖ್ಯೋಪಾಧ್ಯಾಯರುಗಳು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಇರುವೆಡೆ ಅವಶ್ಯಕ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ಸರಬರಾಜು ಇರುವುದಿಲ್ಲ.
ಬಿಸಿಯೂಟಕ್ಕೆ ತೊಂದರೆ ಇಲ್ಲ;- ಇಷ್ಟೆಲ್ಲಾ ಇಲ್ಲದಿದ್ದರ ನಡುವೆಯೂ ಎಲ್ಲಾ ಶಾಲೆಗಳಿಗೆ ಅವಶ್ಯಕವಾದ ಅಕ್ಕಿ, ಬೇಳೆ, ಗೋಧಿ ಮತ್ತಿತರೆ ಪಡಿತರ ವಸ್ತುಗಳು ಮತ್ತು ಹಾಲಿನ ಪುಡಿ ಸರಬರಾಜು ಆಗಿದ್ದು, ಮಕ್ಕಳ ಬಿಸಿಯೂಟಕ್ಕೆ ಯಾವುದೇ ತೊಂದರೆ ಇರುವುದಿಲ್ಲ.
ಎಲ್ಲಾ ಶಾಲೆಗಳಲ್ಲಿಯೂ ಈ ಸಂಬಂಧ ಕೊರತೆಗಳು ಕಾಡುತ್ತಿದ್ದರೂ ಸಹ ಯಾವುದೇ ಶಾಲಾ ಮುಖ್ಯೋಪಾಧ್ಯಾಯರುಗಳಾಗಲಿ, ಶಾಲಾ ಅಭಿವೃದ್ಧಿ ಸಮಿತಿ ಯವರುಗಳಾಗಲಿ ಈ ಕೊರತೆಗಳ ಬಗ್ಗೆ ಅಧಿಕೃತವಾಗಿ ಮಾತನಾಡಲು ಬಯಸುತ್ತಿಲ್ಲ. ಮಾತನಾಡಿದರೆ ತಮ್ಮ ಶಾಲೆಗಳಿಗೆ ಬರಬೇಕಾದ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳು ಮತ್ತೂ ತಡವಾಗುತ್ತದೆ ಎಂಬ ಕಾರಣದಿಂದ ಇರಬಹುದು.