ಶಾಲೆಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ ಆತಂಕ ಬೇಡ

ಬೆಂಗಳೂರು, ಏ.೧- ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಕೋವಿಡ್ ಸೋಂಕು ಹರಡದಂತೆ ಸಾಮಾಜಿಕ ಅಂತರ ಕಡ್ಡಾಯಗೊಳಿಸಿರುವ ಹಿನ್ನೆಲೆ ಪೋಷಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಪಾಲಿಕೆಯ ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಬಿ.ರೆಡ್ಡಿ ಶಂಕರ್ ಬಾಬು ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯ ೧೬೧ ಶಾಲೆಗಳ ಪೈಕಿ ಬಹುತೇಕ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ ಭಾಗಶಃ ವರದಿ ನೆಗಟಿವ್ ಬಂದಿದೆ. ಹೀಗಾಗಿ, ಆತಂಕಕ್ಕೆ ಒಳಪಡುವ ಅವಶ್ಯತೆ ಇಲ್ಲ ಎಂದರು.
ಜೋಗಪಾಳ್ಯ ಹೊರsತುಪಡಿಸಿ ಬೇರೆ ಎಲ್ಲಿಯೂ ವಿದ್ಯಾರ್ಥಿಗಳಲ್ಲಿ ಸರಣಿ ಸೋಂಕಿನ ಪ್ರಕರಣಗಳು ಕಂಡುಬಂದಿಲ್ಲ ಎಂದ ಅವರು, ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಜತೆಗೆ, ಒಂದು ಕಡೆ ಓರ್ವ ವಿದ್ಯಾರ್ಥಿ ಅಥವಾ ಇಬ್ಬರು ವಿದ್ಯಾರ್ಥಿಗಳು ಮಾತ್ರ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.
ಶಾಲೆಗಳನ್ನು ಮುಚ್ಚುವ ಕುರಿತು ಯಾವುದೇ ರೀತಿಯ ಚಿಂತನೆ ಇಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನಾವು ಶಾಲೆಗಳನ್ನು ನಡೆಸುತ್ತಿದ್ದು, ಕೊರೊನಾ ಹರಡದಂತೆಯೂ ಕಡ್ಡಾಯ ಮಾಸ್ಕ್, ಕೈತೊಳೆಯುವುದು, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.