ಶಾಲೆಗಳಲ್ಲಿ ಸನಾತನ ಧರ್ಮವನ್ನು ಉಳಿಸುವ ಶಿಕ್ಷಣ ಅಗತ್ಯ

ಗೌರಿಬಿದನೂರು, ಸೆ.೨೧- ನಮ್ಮ ಸನಾತನ ಧರ್ಮವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅದನ್ನು ಶಾಲಾ ಹಂತದಿಂದಲೇ ಮಕ್ಕಳಿಗೆ ಕಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕಾಗಿದೆ ಎಂದು ಕೋಟಾಲದಿನ್ನೆಯಲ್ಲಿನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಆದಿಶೇಷರಾವ್ ತಿಳಿಸಿದರು.
ನಗರದ ತ್ಯಾಗರಾಜ ಕಾಲೋನಿಯಲ್ಲಿನ ಶ್ರೀವಿವೇಕಾನಂದ ಶಾಲೆಯಲ್ಲಿ ಇತ್ತೀಚಿನ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಕೇವಲ ಶಿಕ್ಷಣವಲ್ಲದೆ ನಾಗರೀಕತೆ, ಸಂಸ್ಕಾರ ಮತ್ತು ಧಾರ್ಮಿಕ ವಿಧಿವಿಧಾನಗಳ ಬಗ್ಗೆ ತಿಳಿಸುವ ಮೂಲಕ ಅವರಲ್ಲಿ ಸಮಾಜದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ಬದುಕುವ ಶಕ್ತಿಯನ್ನು ಕಲಿಸುವ ಪ್ರಯತ್ನ ಶಿಕ್ಷಣ ಸಂಸ್ಥೆಗಳು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ವಿವೇಕಾನಂದ ಶಾಲೆಯು ಮಕ್ಕಳ ಭವಿಷ್ಯಕ್ಕೆ ಆಅಸರೆಯಾಗುವಂತಹ ಮೌಲ್ಯಾಧಾರಿತ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿಯಿಂದ ಕಲಿಸುತ್ತಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ. ಪೋಷಕರು ಮಕ್ಕಳಲ್ಲಿನ ಕಲಿಕಾ ದಾಹಕ್ಕೆ ತಕ್ಕಂತೆ ಶಿಕ್ಷಣ ಮತ್ತು ಸಂಸ್ಕಾರ ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಪಾಶ್ಚಿಮಾತ್ಯ ಕಲೆ ಮತ್ತು ಭಾಷೆಯ ಜತೆಗೆ ಮಾತೃಭಾಷೆ ಮತ್ತು ಮೌಲ್ಯಗಳನ್ನು ಕಲಿಸುವುದು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರಾದ ಸಿ.ಆರ್.ನರಸಿಂಹಮೂರ್ತಿ ಮಾತನಾಡಿ, ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಆರಂಭವಾದ ಈ ಶಾಲೆಯಲ್ಲಿ ಪ್ರತೀ ವರ್ಷ ಉತ್ತಮ ಫಲಿತಾಂಶವನ್ನು ಪಡೆಯಲು ಸಹಕಾರಿಯಾಗಿದೆ. ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳಿಗೆ ಗುರ್ತಿಸಿ ಪ್ರೋತ್ಸಾಹಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಇದರಿಂದಾಗಿ ಮಕ್ಕಳು ಶಾಲಾ ಹಂತದಿಂದಲೇ ಕ್ರೀಯಾಶೀಲವಾಗಿ ಕಲಿತು ಉನ್ನತ ಸ್ಥಾನಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯರ ವೇಷಭೂಷಣಗಳನ್ನು ತೊಟ್ಟು ಆಕರ್ಷಣೀಯವಾಗಿದ್ದರು. ಶಾಲಾ ಶಿಕ್ಷಕರು ಮತ್ತು ಪೋಷಕರ ಮಕ್ಕಳ ದೈವೀಸ್ವರೂಪವನ್ನು ಕಂಡು ಸಂತಸಪಟ್ಟರು.
ಈ ವೇಳೆ ಶಾಲೆಯ ಕಾರ್ಯದರ್ಶಿ ಸಿ.ಎನ್.ನಂಜೇಗೌಡ, ಮುಖ್ಯ ಶಿಕ್ಷಕರಾದ ಕೆ.ಶ್ರೀನಿವಾಸ್, ದೈಹಿಕ ಶಿಕ್ಷಣದ ಪರಿವೀಕ್ಷಕರಾದ ಹನುಮಂತರೆಡ್ಡಿ, ಶಾಲಾ ಶಿಕ್ಷಕರಾದ ತಿಮ್ಮೇಗೌಡ, ಅಂಬರೀಶ್, ಯಶೋದ, ಅನಿತಾ, ರೂಪ, ದ್ರಾಕ್ಷಾಯಿಣಿ, ಅನಿತ ಸೇರಿದಂತೆ ಶಾಲಾ ಶಿಕ್ಷಕಿಯರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.