ಶಾಲೆಗಳಲ್ಲಿ ವಿದ್ಯಾಗಮ-ಪೂರ್ವಭಾವಿ ಸಭೆ

ಲಕ್ಷ್ಮೇಶ್ವರ,ಡಿ30: ಜನೇವರಿ 1ರಿಂದ 6ನೇ ತರಗತಿಯಿಂದ 9ನೇ ತರಗತಿ ಮಕ್ಕಳಿಗಾಗಿ ಶಾಲೆಗಳಲ್ಲಿಯೇ ವಿದ್ಯಾಗಮ-2 ಕಾರ್ಯಕ್ರಮ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಇಲ್ಲಿನ ತಹಶೀಲ್ದಾರರ ಕಚೇರಿಯಲ್ಲಿ ತಾಲ್ಲೂಕುಮಟ್ಟದ ಅಧಿಕಾರಿಗಳು ಪೂರ್ವಭಾವಿ ಸಭೆ ನಡೆಯಿತು.
ಬಿಇಓ ಆರ್.ಎಸ್. ಬುರುಡಿ ಮಾತನಾಡಿ ವಿದ್ಯಾಗಮ-2 ಕುರಿತು ಈಗಾಗಲೇ ಮುಖ್ಯ ಶಿಕ್ಷಕ ಮತ್ತು ಸಹಶಿಕ್ಷಕರ ಸಭೆ ನಡೆಸಲಾಗಿದೆ. ಜನೇವರಿ 1ರಿಂದ 10ನೇ ತರಗತಿ ಮಕ್ಕಳಿಗಾಗಿ ತರಗತಿಗಳು ಆರಂಭಗೊಳ್ಳುವವು, ಈಗಾಗಲೇ ಶಿಕ್ಷಕರ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ. ಗ್ರಾಮೀಣ ಭಾಗದಲ್ಲಿ ಎಲ್ಲ ಶಾಲೆಗಳಿಗೆ ಸ್ಯಾನಿಟೈಸ್ ಮಾಡಲು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗಿದೆ. ಪಾಲಕರಿಂದ ಮಕ್ಕಳು ಒಪ್ಪಿಗೆ ಪತ್ರದೊಂದಿಗೆ ಮಾಸ್ಕ್, ಕುಡಿಯುವ ನೀರನ್ನು ತರಲು ಸೂಚಿಸಲಾಗಿದೆ. ಅಲ್ಲದೆ ಬಿಸಿಯೂಟವನ್ನು ಸಧ್ಯದ ಮಟ್ಟಿಗೆ ತಟಸ್ಥಗೊಳಿಸಲಾಗಿದೆ’ ಎಂದರು.
ತಹಶೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟರ ಮಾತನಾಡಿ ‘ಗ್ರಾಮ ಪಂಚಾಯ್ತಿ ಚುನಾವಣೆ ಸಮಯದಲ್ಲಿ ತಾಲ್ಲೂಕಿನ ಎಲ್ಲ ಶಾಲೆಗಳು ಸ್ವಚ್ಛಗೊಂಡಿವೆ. ಈಗ ವಿದ್ಯಾಗಮ-2 ಕಾರ್ಯಕ್ರಮವನ್ನು ಕೊರೊನಾ ನಿಯಂತ್ರಿಸಲು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯತೆ ಇದೆ. ಕಾರಣ ಆಯಾ ಇಲಾಖೆಗಳ ಮುಖ್ಯಸ್ಥರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು’ ಎಂದ ಅವರು ‘ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೆ ವಿದ್ಯಾಗಮ-2 ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು’ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವೈ.ಎಚ್. ನದಾಫ್, ಅಕ್ಷರ ದಾಸೋಹ ಎಡಿ ಶರೀಫ್‍ಸಾಬ್ ನದಾಫ್, ಸಮಾಜ ಕಲ್ಯಾಣ ಅಧಿಕಾರಿ ಬಿ.ಎಂ. ಹರ್ತಿ, ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಇದ್ದರು.