ಶಾಲೆಗಳಲ್ಲಿ ಮಕ್ಕಳ ಕಲರವ; ಆರಂಭೋತ್ಸವ ಪುಸ್ತಕ, ಸಮವಸ್ತ್ರ ಆರಂಭದ ದಿನವೇ ವಿತರಣೆಗೆ ಸಿದ್ಧತೆ

ಕೋಲಾರ,ಮೇ ೩೧- ಶಾಲೆಗಳು ಆರಂಭಕ್ಕೆ ಮೇ.೨೯ ರಂದು ಸಕಲ ಸಿದ್ದತೆ ಮಾಡಿಕೊಂಡು ಮೇ.೩೧ ರಂದು ಶಾಲಾ ಆರಂಭೋತ್ಸವ ಹಬ್ಬವಾಗಿ ಸಂಭ್ರಮದಿಂದ ಆಚರಿಸಿ, ತಳಿರುತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಮಕ್ಕಳನ್ನು ಸ್ವಾಗತಿಸಿ, ಈ ಶೈಕ್ಷಣಿಕ ಸಾಲನ್ನು ಗುಣಾತ್ಮಕ ಶೈಕ್ಷಣಿಕ ವರ್ಷವಾಗಿಸಲು ಸಜ್ಜಾಗಿ ಎಂದು ಶಿಕ್ಷಕರಿಗೆ ಬಿಇಓ ಕನ್ನಯ್ಯ ಕರೆ ನೀಡಿದರು.
ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶಾಲಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಕ್ಕಳಿಗೆ ಮೇ.೩೧ರೊಳಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿರಬೇಕು ಎಂದು ತಾಕೀತು ಮಾಡಿದರು.
ಶಾಲೆಗಳ ಸಮಗ್ರ ಅಭಿವೃದ್ದಿಗೆ ಒತ್ತು ನೀಡಿ, ನಿಮ್ಮ ಗುರಿ ಶೇ.೧೦೦ ಫಲಿತಾಂಶವಾಗಿರಲಿ, ಪ್ರತಿ ಮಗುವು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂಬ ಆಶಯದೊಂದಿಗೆ ಕೆಲಸ ಮಾಡುವ ಸಂಕಲ್ಪ ಮಾಡಿ ಎಂದರು.
ಶಾಲೆ ಆರಂಭಕ್ಕೆ ಮುನ್ನಾ ಒಂದು ದಿನ ಎಲ್ಲಾ ಶಿಕ್ಷಕರು, ಸಿಬ್ಬಂದಿ ಶಾಲಾ ಪ್ರಾರಂಭದ ಪೂರ್ವದಲ್ಲಿ ಶಾಲೆಗಳನ್ನು ಸಿದ್ದಗೊಳಿಸಿ ಆಕರ್ಷಣೀಯತಗೊಳಿಸಲು ಕ್ರಮ ವಹಿಸುವಂತೆ ಕಿವಿಮಾತು ಹೇಳಿದರು.
ಶಾಲಾಭಿವೃದ್ದಿ ಸಮಿತಿ, ಪೋಷಕರು, ಶಿಕ್ಷಕರು ಜತೆಗೂಡಿ ಶಾಲೆಗಳನ್ನು ಸ್ವಚ್ಚಗೊಳಿಸಿ, ತಳಿರುತೋರಣಗಳಿಂದ ಅಲಂಕರಿಸಿ ಮಕ್ಕಳನ್ನು ಆಹ್ವಾನಿಸಲು ಸಿದ್ದರಿರುವಂತೆ ಅವರು ಸೂಚಿಸಿ, ಮಕ್ಕಳು ಶಾಲೆಗೆಬರುವ ದಿನ ಶಾಲೆಯಲ್ಲಿ ಹಬ್ಬದಂತಿರಬೇಕು, ಈ ಸಂದೇಶ ಪೋಷಕರಿಗೆ ತಲುಪಬೇಕು ಎಂದರು.
ಈಗಾಗಲೇ ಶಾಲೆಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಸರಬರಾಜು ಮಾಡಲು ಅಗತ್ಯ ಕ್ರಮವಹಿಸಲಾಗಿದೆ, ಶಾಲಾರಂಭದ ದಿನ ಮೇ.೩೦ ಅಥವಾ ೩೧ ರಂದೇ ಮಕ್ಕಳಿಗೆ ವಿತರಿಸಲು ಸೂಚಿಸಿದರು.
ಮೇ.೩೧ ರಿಂದ ಜೂ.೧ ದಾಖಲಾಗಿ ಆಂದೋಲನ-
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಕ್ರಮವಹಿಸಲು ಇಲಾಖೆಯ ಸುತ್ತೋಲೆಯಂತೆ ಮೇ.೩೧ ರಿಂದ ಜೂ.೩ ರವರೆಗೂ ದಾಖಲಾತಿ ಆಂದೋಲನ ನಡೆಸಿ, ಮಕ್ಕಳನ್ನು ಶಾಲೆಗೆ ಸ್ವಾಗತಿಸಿ, ಮತ್ತಷ್ಟು ಮಕ್ಕಳಿಗೆ ನಿಮ್ಮ ಕಾರ್ಯ ಪ್ರೇರಣೆ ನೀಡುವಂತಿರಲಿ, ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಮತ್ತು ಆಕರ್ಷಣೀಯವಾದ ರೀತಿಯಲ್ಲಿ ಸಜ್ಜುಗೊಳಲಿಸಲು ಸೂಚಿಸಿದರು.
ಎಸ್‌ಡಿಎಂಸಿ, ದಾನಿಗಳ ನೆರವು ಪಡೆದು ಶಾಲೆಯಲ್ಲಿ ಅಗತ್ಯತೆಗಳನ್ನು ಪೂರೈಸಲು ಗಮನಹರಿಸಿ, ಸರ್ಕಾರಿ ಶಾಲೆಗಳ ಕುರಿತು ಪೋಷಕರಲ್ಲಿನ ಕೀಳರಿಮೆ ಹೋಗಲಾಡಿಸುವುದು ಅಗತ್ಯವಿದೆ, ಈ ನಿಟ್ಟಿನಲ್ಲಿ ಶಾಲೆಗಳನ್ನು ಮತ್ತಷ್ಟ ಆಕರ್ಷಣೀಯಗೊಳಿಸುವ ಅಗತ್ಯವಿದೆ ಎಂದರು.
ಶಾಲೆಗಳಲ್ಲಿ ನೀರಿನ ಟ್ಯಾಂಕ್, ಅಡುಗೆ ಕೋಣೆ, ದಾಸ್ತಾನು ಕೋಣೆ, ತರಗತಿ ಕೊಠಡಿಗಳ ಸ್ವಚ್ಚತೆಗೆ ಒತ್ತು ನೀಡಬೇಕು, ಅಡುಗೆ ಪಾತ್ರೆಗಳನ್ನು ಬಿಸಿನೀರಿನಿಂದ ಸ್ವಚ್ಚಗೊಳಿಸಿ ಅಡುಗೆಗೆ ಅಣಿ ಮಾಡಿಕೊಳ್ಳಬೇಕು, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆಗೆ ಕ್ರಮವಹಿಸಲು ಸೂಚಿಸಿದರು.
ಮೇ.೨೯ ರಿಂದ ಜೂ.೧೫ ಮಿಂಚಿನ ಸಂಚಾರ-
ಡಿಡಿಪಿಐ ಹಾಗೂ ಬಿಇಒ ನೇತೃತ್ವದ ತಂಡಗಳಿಂದ ಮಿಂಚಿನ ಸಂಚಾರ ನಡೆಯಲಿದೆ. ಮಿಂಚಿನ ಸಂಚಾರದ ತಂಡಗಳು ಜಿಲ್ಲಾದ್ಯಂತ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಸ್ವಚ್ಚತೆ, ಶಾಲಾ ಪ್ರಾರಂಭೋತ್ಸವಕ್ಕೆ ಕೈಗೊಂಡಿರುವ ಕ್ರಮಗಳು, ದಾಖಲೆಗಳ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.
ಮಕ್ಕಳ ನಿರಂತರ ಹಾಜರಾತಿಗಾಗಿ ಶಿಕ್ಷಕರ ತಂಡಗಳು ಮನೆ ಮನೆ ಭೇಟಿ ಕಾರ್ಯಕ್ರಮ ಹಾಕಿಕೊಳ್ಳಿ, ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಎಚ್ಚರವಹಿಸಿ, ಪೋಷಕರು, ಎಸ್‌ಡಿಎಂಸಿ ಸಹಕಾರ ಪಡೆದು ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
೮, ೯ನೇ ತರಗತಿಗಳಲ್ಲಿ ಶುಲ್ಕ ಪಾವತಿಸಿಲ್ಲ ಎಂದು ಮಕ್ಕಳನ್ನು ಮುಂದಿನ ತರಗತಿಗಳಿಗೆ ದಾಖಲಿಸಿಕೊಳ್ಳುವುದಿಲ್ಲ ಎಂದರೆ ಅದು ಅಪರಾಧವಾಗುತ್ತದೆ, ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದರೆ ಪಟ್ಟಿ ಮಾಡಿ, ಶಿಕ್ಷಕರ ಕೊರತೆ ಇದ್ದರೆ ಅಗತ್ಯ ಅತಿಥಿ ಶಿಕ್ಷಕರ ನೇಮಕಕ್ಕೆ ಇಲಾಖೆಗೆ ಮಾಹಿತಿ ರವಾನಿಸಲು ಸೂಚಿಸಿ ಎಂದು ತಿಳಿಸಿದರು.
ದಾಖಲಾತಿಗಳ ನಿರ್ವಹಣೆಗೆ ಸೂಚನೆ-
ಶಾಲೆಯಲ್ಲಿ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಕ್ಲಬ್‌ಗಳ ರಚನೆ, ಸಂಸತ್ ರಚನೆಗೆ ನೋಡಲ್ ಶಿಕ್ಷಕರನ್ನು ನೇಮಿಸಿ, ಶಾಲಾ ಕ್ರಿಯಾಯೋಜನೆ, ಶಾಲಾ ಪಂಚಾಂಗ, ಶಾಲಾಭಿವೃದ್ದಿ ಯೋಜನೆ, ಶಾಲಾ ಶೈಕ್ಷಣಿಕ ಯೋಜನೆ, ವೇಳಾಪಟ್ಟಿ ಸಿದ್ದಪಡಿಸಿ, ಜೂ.೧ರಿಂದ ಜೂ.೩೦ ರವರೆಗೂ ಸೇತುಬಂಧ ನಡೆಸಿ ಎಂದರು.
ಹಳೆ ವಸ್ತುಗಳ ವಿಲೇವಾರಿ ಎಸ್‌ಡಿಎಂಸಿ ನಡಾವಳಿ ಮಾಡಿ ನಿರ್ವಹಿಸಿ, ಮಕ್ಕಳಿಗೆ ಹೊಸ ಪುಸ್ತಕ ನೀಡುವಾಗ ಕಳೆದ ವರ್ಷದ ಹಳೆ ಪುಸ್ತಕ ವಾಪಸ್ಸು ಪಡೆದು ಸಂಗ್ರಹಿಸಿ ಬುಕ್ ಬ್ಯಾಂಕ್ ಮಾಡಿ ಎಂದು ಸಲಹೆ ನೀಡಿದರು.
ಶುಚಿ,ರುಚಿ ಊಟಕ್ಕೆ ಆದ್ಯತೆ-ಸುಬ್ರಹ್ಮಣ್ಯಂ-:
ತಾಲ್ಲೂಕು ಮಧ್ಯಾಹ್ನ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯಂ ಮಾತನಾಡಿ, ಶಾಲೆ ಆರಂಭಕ್ಕೆ ಮುನ್ನವೇ ಬಿಸಿಯೂಟಕ್ಕೆ ಆಹಾರಧಾನ್ಯ, ಹಾಲಿನಪುಡಿ ಸರಬರಾಜಾಗಲಿದೆ, ಕಳೆದ ಬಾರಿಯ ಉಳಿಕೆ ಧಾನ್ಯಗಳನ್ನು ಸಂರಕ್ಷಣೆ ಮಾಡಿ ಎಂದು ತಾಕೀತು ಮಾಡಿದ ಅವರು, ಮಕ್ಕಳಿಗೆ ಗುಣಮಟ್ಟದ, ಶುಚಿ, ರುಚಿಯಾದ ಆಹಾರ ಸಿಗಬೇಕು ಎಂದರು.
ಸಭೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್, ತಾಲ್ಲೂಕು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ಇಸಿಒಗಳಾದ ರಾಘವೇಂದ್ರ, ಸಿಆರ್‌ಪಿ ಜಮೀಲ್ ಅಹಮದ್ ಇದ್ದರು.