ಶಾಲೆಗಳಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆ ಇದೆ;   ಹೆಚ್ ಕೃಷ್ಣಪ್ಪ.

ಸಂಜೆವಾಣಿ ವಾರ್ತೆ

ದಾವಣಗೆರೆ. ಜು.೧೨; ಹಲವಾರು ವರ್ಷಗಳ ಹಿಂದೆ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯಕ್ರಮ ಆಧಾರಿತ ಶಿಕ್ಷಣದ ಜೊತೆಗೆ ಪ್ರತಿದಿನದ ಒಂದು ಅವಧಿಯಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಬೋಧಿಸಲಾಗುತ್ತಿತ್ತು. ಇತ್ತೀಚಿಗೆ ಮಕ್ಕಳಿಗೆ ನೈತಿಕ ಶಿಕ್ಷಣದ ಅವಧಿ ಇಲ್ಲದಂತಾಗಿ ಮಕ್ಕಳಿಗೆ ಪಠ್ಯಕ್ರಮ ಮಾತ್ರ ಬೋಧನೆ ಆಗುತ್ತಿದೆ. ಮಕ್ಕಳಿಗೆ ಪಠ್ಯಕ್ರಮ ಶಿಕ್ಷಣದ ಜೊತೆಗೆ ಯೋಗ ಮತ್ತು ನೈತಿಕ ಶಿಕ್ಷಣದ  ಅಗತ್ಯವಿದೆ ಎಂದು ಹರಿಹರ ತಾಲೂಕು ಕ್ಷೇತ್ರ ಸಮಾನಾಧಿಕಾರಿಗಳಾದ ಹೆಚ್. ಕೃಷ್ಣಪ್ಪ ಅಭಿಪ್ರಾಯಪಟ್ಟರು. ಗುರುಭವನದಲ್ಲಿ ನಡೆದ ತಾಲೂಕು ಮಟ್ಟದ ಸೇವಾದಳ ತರಬೇತಿ ಪಡೆದ ಶಿಕ್ಷಕರ ಪುನಶ್ಚೇತನ ಕಾರ್ಯಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಡಾ. ನಾ.ಸು ಹರಡಿಕರ್ ಅವರು ಸೇವಾದಳವನ್ನ ಸ್ಥಾಪಿಸಿದ್ದು, ಇದರ ಉದ್ದೇಶಗಳು ನೈತಿಕ ಶಿಕ್ಷಣಕ್ಕೆ ಪೂರಕವಾಗಿವೆ, ಪ್ರತಿಯೊಂದು ಶಾಲೆಯಲ್ಲಿ ಸೇವಾದಳ ಘಟಕ ಆರಂಭವಾಗಬೇಕು, ಮಕ್ಕಳಿಗೆ ಸೇವಾದಳ ಶಿಕ್ಷಣ ದೊರೆಯಬೇಕೆಂದು ತಿಳಿಸಿದರು.ಪ್ರಭಾರೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಮಂಜುಳಮ್ಮ ರವರು ಮಾತನಾಡಿ ಕ್ರೀಡಾಕೂಟಗಳು ಮುಗಿದ ನಂತರ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ತರಬೇತಿಗಳನ್ನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಸೇವಾದಳ ಸದಸ್ಯ ಮಹಾಂತಯ್ಯ ಸಿ  ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಭಾರತ ಸೇವಾದಳದ ಹಿರಿಯಸೇನಾನಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಸೇವಾದಳ ಶಿಕ್ಷಣವನ್ನು ನೀಡಿದ ಮುನಿಸ್ವಾಮಿಯವರು ಬೆಂಗಳೂರಿನಲ್ಲಿ ನಿಧನರಾಗಿದ್ದು ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಚರಣೆಯನ್ನು ಮಾಡಿ ಅವರ ಸೇವೆಯನ್ನು ಶ್ಲಾಘಿಸಲಾಯಿತು.ಸಮಿತಿ ಸದಸ್ಯ ಹಾಲಪ್ಪ ಸ್ವಾಗತಿಸಿದರು, ವಲಯ ಸಂಘಟಕ ಅಣ್ಣಪ್ಪ ನವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಟಿ. ಎಸ್. ಕುಮಾರ್ ಸ್ವಾಮಿ ವಂದಿಸಿದರು.ಜಿ. ಬಿ. ಪಾಟೀಲ್ ನಿರೂಪಿಸಿದರು.