ಶಾಲೆಗಳಲ್ಲಿ ಧ್ಯಾನ ಸಿದ್ದು ಆಕ್ಷೇಪಕ್ಕೆ ನಾಗೇಶ್ ಕಿಡಿ

ಬೆಂಗಳೂರು,ನ.೫- ಶಾಲೆಗಳಲ್ಲಿ ಧ್ಯಾನ, ಯೋಗ ಕಲಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಕಿಡಿಕಾರಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಧ್ಯಾನ ವಿಚಾರದಲ್ಲೂ ಗೊಂದಲ ಸೃಷ್ಟಿಸುತ್ತಿರುವುದು ದುರಾದೃಷ್ಟಕರ ಎಂದಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಬಿ.ಸಿ ನಾಗೇಶ್ ಮಾನಸಿಕ, ದೈಹಿಕ ಆರೋಗ್ಯ, ಏಕಾಗ್ರತೆ, ವ್ಯಕ್ತಿತ್ವ ವಿಕಸನಕ್ಕಾಗಿ ಶಾಲಾ ಮಕ್ಕಳು ೧೦ ನಿಮಿಷ ಧ್ಯಾನ ಮಾಡುವ ಉತ್ತಮ ಆಲೋಚನೆಯಲ್ಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.
ಮಕ್ಕಳು ಧ್ಯಾನ ಮಡುವುದು ಗಿಮಿಕ್ ಹೇಗೆ ಆಗುತ್ತದೆ ಎಂಬುದನ್ನು ಜನತೆಗೆ ಸ್ವಲ್ಪ ವಿವರಿಸುವಿರಾ? ಎಂದು ಬಿ.ಸಿ ನಾಗೇಶ್ ಸಿದ್ದರಾಮಯ್ಯರವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.ನೀವು ಅಧಿಕಾರದಲ್ಲಿದ್ದಾಗ ಬಾರದ ಶೈಕ್ಷಣಿಕ ಅಭಿವೃದ್ಧಿಯ ಆಲೋಚನೆಗಳು ಈಗ ನಿಮಗೆ ಬರುತ್ತಿರುವುದು ಸಂತೋಷ. ಅರ್ಜಿ ಹಾಕದವರು, ಪರೀಕ್ಷೆ ಬರೆಯದವರನ್ನು ಶಿಕ್ಷಕರನ್ನಾಗಿ ನೇಮಿಸಿ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದ
ಅಪಕೀರ್ತಿ ನಿಮ್ಮ ಸರ್ಕಾರಕ್ಕೆ ಸಲ್ಲಬೇಕಲ್ಲವೇ? ಭ್ರಷ್ಟಾಚಾರ, ಸಾಲು ಸಾಲು ಹಗರಣಗಳಲ್ಲಿ ಮಿಂದೆದ್ದಿರುವುದು ಯಾರು ಎಂಬುದು ಜನತೆಗೆ ಗೊತ್ತಿದೆ ಎಂದು ಸಚಿವ ನಾಗೇಶ್ ಸಿದ್ದರಾiಯ್ಯರವರನ್ನು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಸಂಶೋಧಕರು, ವೈದ್ಯರು, ವಿಜ್ಞಾನಿಗಳ ಪ್ರಕಾರ ಧ್ಯಾನ ಮತ್ತು ಯೋಗ ಮಾಡುವುದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ, ಆದರೆ, ಸಿದ್ದರಾಮಯ್ಯರವರು ಮಾತ್ರ ಧ್ಯಾನ ಮಾಡಿದರೆ ಮಕ್ಕಳು ಕುಗ್ಗಿ ಹೋಗುತ್ತಾರೆ ಎನ್ನುವುದು ಹಾಸ್ಯಾಸ್ಪದವಾಗಿದೆ ಎಂದು ಸಚಿವ ನಾಗೇಶ್ ವ್ಯಂಗ್ಯವಾಡಿದ್ದಾರೆ.