ಮರಳಿ ಶಾಲೆಗೆ…..
ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಆರಂಭವಾಗಿವೆ. ತಳಿರು-ತೋರಣಗಳಿಂದ ಸಿಂಗರಿಸಿ ಚಿಣ್ಣರನ್ನು ಶಾಲಾ ಆಡಳಿತ ಮಂಡಳಿ ಅದ್ಧೂರಿ ಸ್ವಾಗತ ನೀಡಿದರು.
ಬೆಂಗಳೂರು, ಮೇ.೩೧- ರಾಜ್ಯಾದ್ಯಂತ ಸರ್ಕಾರಿ, ಅನುದಾನ ಹಾಗೂ ಅನುದಾನರಹಿತ ಶಾಲೆಗಳು ಇಂದಿನಿಂದ ಆರಂಭಗೊಂಡಿವೆ. ಬೇಸಿಗೆ ರಜೆಯನ್ನು ಸವಿದು ಮಕ್ಕಳು ಶಾಲೆಯತ್ತ ಮುಖ ಮಾಡಿದ್ದಾರೆ.
ಇದರಿಂದ ಶಾಲೆಗಳಲ್ಲಿ ಚಿಣ್ಣರ ಕಲರವ ಮನೆ ಮಾಡಿದೆ. ಮಕ್ಕಳ ಹೆಗಲಿಗೆ ಬ್ಯಾಗ್‌ಗಳನ್ನು ಹಾಕಿಕೊಂಡು ಶಾಲೆಗೆ ಆಗಮಿಸಿದಾಗ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ ನೀಡಿ ಸಡಗರ, ಸಂಭ್ರಮಗಳಿಂದ ಬರ ಮಾಡಿಕೊಂಡರು.ರಾಜಧಾನಿ ಬೆಂಗಳೂರು ಸೇರಿದಂತೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಕೆಲವು ಶಾಲೆಗಳಿಗೆ ತಳಿರು ತೋರಣಗಳನ್ನು ಬಾಳೆಕಂದುಗಳನ್ನು ಕಟ್ಟಿ, ಆವರಣದಲ್ಲಿ ರಂಗೋಲಿ ಹಾಕಿದ್ದರೆ, ಮತ್ತೆ ಕೆಲವೆಡೆ ಮಕ್ಕಳಿಗೆ ಹೂವು, ಚಾಕೊಲೇಟ್ ನೀಡಿ ಸ್ವಾಗತಿಸಲಾಯಿತು.ದಿನಪೂರ್ತಿ ಶೈಕ್ಷಣಿಕ ಚಟುವಟಿಕೆಯ ಜತೆ ಜತೆಗೆ ಕ್ರೀಡೆ, ಚರ್ಚೆ, ರಸ ಪ್ರಶ್ನೆ, ಸಂವಾದ?ಹೀಗೆ ವಿನೂತನ ಕಾರ್ಯಕ್ರಮಗಳೊಂದಿಗೆ ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಬಿಸಿಯೂಟದ ಜತೆಗೆ ಕೆಲವೆಡೆ ಸಿಹಿ ವಿತರಿಸಲಾಯಿತು.ಶಾಲೆ ಆರಂಭಕ್ಕೆ ಅಧಿಕಾರಿಗಳು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಪೂರ್ವಸಿದ್ಧತೆ ಮಾಡಿಕೊಂಡಿದ್ದಾರೆ. ಬಹುತೇಕ ಶಾಲೆಗಳಲ್ಲಿ ಮೊದಲ ದಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದ ದೃಶ್ಯ ಕಂಡು ಬಂತು.ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು ೬೨,೨೨೯ ಶಾಲೆಗಳು ರಾಜ್ಯದಲ್ಲಿವೆ. ಇದರಲ್ಲಿ ೨೫,೨೭೮ ಕಿರಿಯ ಪ್ರಾಥಮಿಕ ಶಾಲೆಗಳಿದ್ದು, ಹಿರಿಯ ಪ್ರಾಥಮಿಕ ಶಾಲೆಗಳು ೩೬,೯೫೧ ಹಾಗೂ ೧೫, ೮೬೭ ಮಾಧ್ಯಮಿಕ ಶಾಲೆಗಳಿದ್ದು, ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಅತ್ಯಂತ ಹುರುಪು, ಉತ್ಸಾಹದಿಂದ ಹಾಜರಾದರು.ಇನ್ನೂ, ಶಾಲೆಗಳು ಆರಂಭವಾಗುತ್ತಿದ್ದಂತೆ ೧ ರಿಂದ ೩ನೇ ತರಗತಿಗೆ ಆರಂಭದ ೩೦ ದಿನಗಳು ಹಾಗೂ ೪ರಿಂದ ೧೦ನೇ ತರಗತಿ ಮಕ್ಕಳಿಗೆ ೧೫ ದಿನಗಳ ಕಾಲ ಸೇತುಬಂಧ ಕಾರ್ಯಕ್ರಮ ನಡೆಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಎಲ್ಲ ಶಾಲೆಗಳಿಗೆ ತಿಳಿಸಿದೆ.
ಪಠ್ಯ ವಿಳಂಬ ಸಾಧ್ಯತೆ: ಈ ಬಾರಿ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಶಾಲೆಗಳ ಆರಂಭದಲ್ಲೇ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸದ್ಯ ಪಠ್ಯ ಪುಸ್ತಕ ಪರಿಷ್ಕರಣೆ ವಿಷಯ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿತರಣೆಯಲ್ಲಿ ಸ್ವಲ್ಪ ವಿಳಂಬವಾಗಲಿದೆ ಎನ್ನಲಾಗುತ್ತಿದೆ. ಆದರೆ ಮೊದಲ ವಾರದಲ್ಲಿಯೇ ಸಮವಸ್ತ್ರ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಎರಡು ತಿಂಗಳ ಬಳಿಕ ಶಾಲೆಗೆ ಆಗಮಿಸಿದ ಮಕ್ಕಳು ಕೂಡ ತಮ್ಮ ನೆಚ್ಚಿನ ಗುರುಗಳ ಮುಖ ನೋಡಿದ ಕೂಡಲೇ ನಗುಮೊಗದಿಂದಲೇ ನಮಸ್ಕಾರ ತಿಳಿಸುತ್ತಾ ಶಾಲೆ ಪ್ರವೇಶಿಸುತ್ತಿದ್ದುದು ಎಲ್ಲೆಡೆ ಕಂಡುಬಂತು.ಎಲ್‌ಕೆಜಿ, ೧ನೇ ತರಗತಿಗೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಖಾಸಗಿ ಶಾಲೆಗಳಲ್ಲಿ ಮುಂದುವರೆದಿದೆ. ಪೋಷಕರು ತಮ್ಮ ಮಕ್ಕಳನ್ನು ಕರೆತಂದು ದಾಖಲಿಸುವ ಕಾರ್‍ಯದಲ್ಲಿ ನಿರತರಾಗಿದ್ದರು.
- ಇಂದಿನಿಂದ ಸೇತುಬಂಧ ಕಾರ್ಯಕ್ರಮ
- ಇಂದಿನಿಂದ ಶಾಲೆಗಳಲ್ಲಿ ತರಗತಿ ಚಟುವಟಿಕೆಗಳು ಶುರುವಾಗಲಿದ್ದು, ಈ ಅವಧಿಯಲ್ಲಿ ೧ರಿಂದ ೩ನೇ ತರಗತಿಗೆ ಆರಂಭದ ೩೦ ದಿನಗಳು ಹಾಗೂ ೪ರಿಂದ ೧೦ನೇ ತರಗತಿ ಮಕ್ಕಳಿಗೆ ೧೫ ದಿನಗಳ ಕಾಲ ’ಸೇತುಬಂಧ’ಕಾರ್ಯಕ್ರಮ ನಡೆಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸೂಚಿಸಿದೆ.ಮಕ್ಕಳಲ್ಲಿನ ಕಲಿಕಾ ಅಂತರ ತಗ್ಗಿಸಲು ಸೇತುಬಂಧವನ್ನು ಸರ್ಕಾರ ಹಮ್ಮಿಕೊಳ್ಳುತ್ತದೆ. ೧ರಿಂದ ೧೦ನೇ ತರಗತಿಗಳಿಗೆ ಸೇತುಬಂಧ ಶಿಕ್ಷಣದ ಸಾಹಿತ್ಯ ಮತ್ತು ವಿನ್ಯಾಸವನ್ನು ಸಿದ್ಧಪಡಿಸಿ ಜseಡಿಣ.ಞಚಿಡಿಟಿಚಿಣಚಿಞಚಿ.gov.iಟಿ/?iಟಿಜಿo-seಣhubಚಿಟಿಜhಚಿ+ಐiಣeಡಿಚಿಣuಡಿe/ಞಟಿ ದಲ್ಲಿ ಅಪ್‌ಲೋಡ್ ಮಾಡಲಾಗಿದೆ.