ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳ ಕಲರವ

ಬೆಂಗಳೂರು, ನ. ೮- ಶಾಲೆಯಲ್ಲಿ ಇಂದಿನಿಂದ ಪುಟಾಣಿ ಮಕ್ಕಳ ಕಲರವ ಆರಂಭವಾಗಿದೆ. ಕೊರೊನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ್ಯಾದಂತ ಎಲ್ಲಾ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಭೌತಿಕ ತರಗತಿಗಳು ಆರಂಭವಾಗಿವೆ.
ಕೊರೊನಾ ಕಾರಣದಿಂದಾಗಿ ಸುಮಾರು ೨೦ ತಿಂಗಳುಗಳಿಂದ ಮಕ್ಕಳು ಶಾಲೆಗೆ ಬಂದಿರಲಿಲ್ಲ. ಇದುವರೆಗೆ ಆನ್ ಲೈನ್ ಮೂಲಕ ತರಗತಿ ನಡೆಸಲಾಗುತ್ತಿತ್ತು. ಇಂದಿನಿಂದ ಭೌತಿಕ ತರಗತಿಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳು ಅತ್ಯಂತ ಉತ್ಸಾಹ, ಹುರುಪಿನಿಂದ ಮತ್ತು ಸಂಭ್ರಮದಿಂದ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ಆದರೆ ಕೆಲವು ಮಕ್ಕಳು ಸುದೀರ್ಘ ಕಾಲದಿಂದ ಶಾಲೆಗೆ ತೆರಳದೆ ಮನೆಯಲ್ಲಿದ್ದ ಕಾರಣ ಶಾಲೆಗೆ ತೆರಳಲು ಹಠ ಮಾಡಿದ ಘಟನೆಗಳು ನಡೆದಿವೆ. ಶಾಲೆಗಳನ್ನು ತಳಿರುತೋರಣದಿಂದ ಶೃಂಗರಿಸಿ, ಬಣ್ಣ ಬಣ್ಣದ ಬಲೂನ್‌ಗಳಿಂದ ಸಿಂಗರಿಸಿ ಶಾಲಾ ಸಿಬ್ಬಂದಿ ಮತ್ತು ಶಿಕ್ಷಕರು ಮಕ್ಕಳಿಗೆ ಚಾಕಲೇಟ್ ನೀಡಿ ಆತ್ಮೀಯವಾಗಿ ಸ್ವಾಗತ ಕೋರಿದರು.
ಮಲ್ಲೇಶ್ವರದಲ್ಲಿರುವ ಬಿಇಎಸ್ ಶಾಲೆಯಲ್ಲಿ ಎಲ್ ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಬಾಳೆಕಂಬ, ಬಣ್ಣ ಬಣ್ಣದ ಬಲೂನ್, ತಳೀರುತೋರಣಗಳಿಂದ ಸಿಂಗರಿಸಿ, ಹಬ್ಬದ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಇನ್ನು ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಇಷ್ಟವಾಗುವ ಗೊಂಬೆ, ಮಕ್ಕಳ ಆಟದ ಸಾಮಾಗ್ರಿಗಳನ್ನು ಇಟ್ಟು ಸ್ವಾಗತ ಕೋರಲಾಯಿತು.
ಮಕ್ಕಳ ಸುರಕ್ಷತೆಗಾಗಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಾರದಲ್ಲಿ ಎರಡು ದಿನ ಮಕ್ಕಳಿಗೆ ರಜೆ ನೀಡಬೇಕು. ಬೆಳಿಗ್ಗೆ ೯.೩೦ ರಿಂದ ೩.೩೦ರವರೆಗೆ ವೇಳಾ ಪಟ್ಟಿ ನಿಗಧಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಶಾಲೆಯಲ್ಲಿ ಪ್ರತಿಯೊಂದು ಮಗುವಿನ ಆರೋಗ್ಯದ ಬಗ್ಗೆ ಶಿಕ್ಷಕರು ಕಟ್ಟುನಿಟ್ಟಾಗಿ ಗಮನಹರಿಸಬೇಕು. ಒಂದು ವೇಳೆ ಸಾಂಕ್ರಾಮಿಕ ರೋಗ ಕಂಡು ಬಂದರೆ ಇಡೀ ಶಾಲೆಯನ್ನು ಮುಚ್ಚಿ, ಸ್ಯಾನಿಟೈಸರ್ ಮಾಡಿ, ಸ್ಥಳೀಯ ಆರೋಗ್ಯಾಧಿಕಾರಿಗಳ ಮಾರ್ಗದರ್ಶನದಂತೆ ಶಾಲೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಶಾಲೆಗೆ ಮಕ್ಕಳು ಹಾಜರಾಗುವ ಮುನ್ನ ಪೋಷಕರಿಂದ ಕಡ್ಡಾಯವಾಗಿ ಪತ್ರ ತರುವಂತೆ ಸೂಚಿಸಲಾಗಿದೆ.
ಇಂದಿನಿಂದ ಶಾಲೆ ಆರಂಭವಾಗಿರುವ ಬಗ್ಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು, ಕಳೆದ ತಿಂಗಳು ಸರ್ಕಾರ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿತ್ತು. ಇದೀಗ ಎಲ್‌ಕೆಜಿ ಹಾಗೂ ಯುಕೆಜಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದೆ. ಶಾಲೆಗಳ ಜೊತೆಯಲ್ಲಿ ಪೋಷಕರು ಸಹ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಲ್ಲಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು.
ಕೋವಿಡ್ ೧೯ ಸೋಂಕಿನ ಪ್ರಮಾಣ ಶೇ. ೨ ಕ್ಕಿಂತ ಕಡಿಮೆಯಿರುವ ತಾಲ್ಲೂಕುಗಳಲ್ಲಿ ಮಾತ್ರ ಶಾಲೆ ಆರಂಭಕ್ಕೆ ಅನುಮತಿ ನೀಡಲಾಗಿದೆ. ತರಗತಿಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಧರಿಸುವುದು ಸ್ವಚ್ಚತೆ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆಯೂ ಸರ್ಕಾರ ಸೂಚಿಸಿದೆ. ಒಟ್ಟಾರೆ ೨೦ ತಿಂಗಳು ನಂತರ ಎಲ್ ಕೆಜಿ, ಯುಕೆಜಿ ಭೌತಿಕ ತರಗತಿಗಳು ಆರಂಭವಾಗುವ ಮೂಲಕ ಶಾಲೆಗಳಲ್ಲಿ ಸಂಭ್ರಮದ ವಾತಾವರಣ ಕಂಡು ಬಂತು.