ಶಾಲೆಗಳತ್ತ ಹೆಜ್ಜೆ ಹಾಕಿದ ಚಿಣ್ಣರು

ತುಮಕೂರು, ಮೇ ೩೧- ಕಳೆದ ಒಂದೂವರೆ ತಿಂಗಳಿನಿಂದ ಬೇಸಿಗೆ ರಜೆಯಲ್ಲಿದ್ದ ಶಾಲೆಗಳು ಇಂದಿನಿಂದ ಪುನರಾರಂಭಗೊಂಡಿದ್ದು, ಬೇಸಿಗೆ ರಜೆಯ ಖುಷಿಯಲ್ಲಿದ್ದ ಮಕ್ಕಳು ಇಂದು ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡು ಶಾಲೆಗಳತ್ತ ಹೆಜ್ಜೆ ಹಾಕಿದರು.
ಬೇಸಿಗೆ ರಜೆ ಬಳಿಕ ಇಂದಿನಿಂದ ಆರಂಭವಾಗುತ್ತಿರುವ ಸರ್ಕಾರಿ ಶಾಲೆಗಳನ್ನು ವಿವಿಧ ಹೂವುಗಳಿಂದ ಸಿಂಗಾರಗೊಳಿಸಿ ಹಬ್ಬದ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವ ಆಚರಿಸುವ ಮುಖೇನ ವಿದ್ಯಾರ್ಥಿಗಳನ್ನು ಗುಲಾಬಿ ಹೂ, ಸಿಹಿ ತಿಂಡಿ ನೀಡಿ ಶಾಲೆಗಳಿಗೆ ಸ್ವಾಗತಿಸಲಾಯಿತು.
೨೦೨೪-೨೫ ನೇ ಸಾಲಿನ ಶೈಕ್ಷಣಿಕ ವರ್ಷದ ಮೇ ೨೯ ರಿಂದ ಪ್ರಾರಂಭವಾಗಿದ್ದು, ಮಕ್ಕಳು ಶಾಲೆಗೆ ಬರುವ ಮೊದಲ ದಿನವಾದ ಇಂದು ಶಾಲೆಗಳಲ್ಲಿ ಸಿಹಿಯೂಟ ಸಿದ್ದಪಡಿಸಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಸಿಹಿಯೂಟ ಬಡಿಸಲಾಯಿತು.
ಕಳೆದ ಒಂದೂವರೆ ತಿಂಗಳಿನಿಂದ ರಜೆಯ ಖುಷಿಯಲ್ಲಿದ್ದ ವಿದ್ಯಾರ್ಥಿಗಳು ಇಂದು ಶಾಲಾ ಸಮವಸ್ತ್ರದೊಂದಿಗೆ ಹೆಗಲಿಗೆ ಶಾಲಾ ಬ್ಯಾಗ್ ಹಾಕಿಕೊಂಡು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ನಗರ, ಗ್ರಾಮೀಣ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಕಂಡು ಬಂತು.
ಕಳೆದ ಒಂದೂವರೆ ತಿಂಗಳಿನಿಂದ ರಜೆ ಇದ್ದ ಕಾರಣ ಶಾಲೆಗಳನ್ನು ಸ್ವಚ್ಛಗೊಳಿಸಿ ಬಾಳೆಕಂದು, ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು. ಶಾಲೆಗಳು ಸರ್ವಾಲಂಕೃತಗೊಂಡಿರುವುದನ್ನು ಮಕ್ಕಳು ನೋಡಿ ಖುಷಿಯಿಂದಲೇ ಶಾಲಾ ಕೊಠಡಿಗಳಿಗೆ ತೆರಳಿದರು.
ಕೆಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸಿಹಿ ಹಂಚಿ, ಗುಲಾಬಿ ಹೂ ನೀಡುವ ಮೂಲಕ ಶಾಲೆಗೆ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.
ನಗರದ ಅಗ್ರಹಾರ, ಮರಳೂರು ದಿಣ್ಣೆ, ಎಂ.ಜಿ. ರಸ್ತೆ. ಆರ್ಯಬಾಲಿಕಾ ಶಾಲೆ, ಮೆಳೇಕೋಟೆ, ಗಂಗಸಂದ್ರ ಸೇರಿದಂತೆ ಜಿಲ್ಲೆಯ ೧೦ ತಾಲ್ಲೂಕುಗಳಲ್ಲೂ ಸರ್ಕಾರಿ ಶಾಲೆಗಳಲ್ಲಿ ಹಬ್ಬದ ವಾತಾವರಣದೊಂದಿಗೆ ಶಾಲೆಗಳನ್ನು ಪ್ರಾರಂಭಿಸಲಾಯಿತು.
ಶಾಲಾ ಪ್ರಾರಂಭೋತ್ಸವದ ದಿನವಾದ ಇಂದೇ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಸಹ ವಿತರಿಸಲಾಯಿತು.
ನಗರದ ಮರಳೂರಿನಲ್ಲಿರುವ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವ ದಿನವಾದ ಇಂದೇ ದಾಖಲಾತಿ ಆಂದೋಲನ ದಿನಾಚರಣೆ ಸಹ ಆಚರಿಸಲಾಯಿತು. ಮುಖ್ಯ ಶಿಕ್ಷಕರಾದ ಪ್ರವೀಣ್‌ಕುಮಾರ್, ಶಿಕ್ಷಕರಾದ ಚಂದ್ರಶೇಖರ್, ವಾಣಿತರಾಣಿ, ಸುಜಾತ, ಪ್ರತಿಭಾ, ಗಿರಿಜಮ್ಮ, ರಮಾದೇವಿ ಹಾಗೂ ಎಸ್‌ಡಿಎಂಸಿ ಸದಸ್ಯರುಗಳು ಪಾಲ್ಗೊಂಡಿದ್ದರು.
ಜೂನ್ ೧೪ ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ-೨ ನಡೆಯಲಿದ್ದು, ಪರೀಕ್ಷೆ-೧ ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಇನ್ನೂ ಹೆಚ್ಚಿನ ಅಂಕ ಗಳಿಸ ಬಯಸುವ ವಿದ್ಯಾರ್ಥಿಗಳಿಗಾಗಿ ಮೇ ೨೯ ರಿಂದ ಜೂನ್ ೧೩ ರವರೆಗೆ ಆಯಾ ಶಾಲೆಗಳಲ್ಲಿ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ನಡೆಸಲಾಗುತ್ತಿದೆ. ಬೇರೆ ಶಾಲೆಗಳಲ್ಲಿ ಓದಿದ್ದರೂ ಪ್ರಸ್ತುತ ವಾಸವಿರುವ ಸ್ಥಳಕ್ಕೆ ಸಮೀಪವಿರುವ ಪ್ರೌಢಶಾಲೆಯಲ್ಲಿ ಹಾಜರಾಗಿ ಪರಿಹಾರ ಬೋಧನೆಯ ಸೌಲಭ್ಯ ಪಡೆಯಬಹುದಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ಮನವಿ ಮಾಡಿದ್ದಾರೆ.