ಶಾಲಾ ಹಂತದಲ್ಲಿಯೇ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸಬೇಕು: ಢವಳಗಿ

ಕಲಬುರಗಿ:ಸೆ.17:ಮಕ್ಕಳಿಗೆ ಶಾಲಾ ಹಂತದಲ್ಲಿಯೇ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಮೂಢ ನಂಬಿಕೆ, ಅಂಧ ಶ್ರದ್ಧೆಗಳಿಂದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಮಕ್ಕಳು ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಂಡು ಅವಿಷ್ಕಾರಗಳನ್ನು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ ಅಭಿಪ್ರಾಯಪಟ್ಟರು.

ರಾಮ ಮಂದಿರ ಸಮೀಪವಿರುವ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ, ಶಿಕ್ಷಣ ಇಲಾಖೆಯ ವತಿಯಿಂದ ತಾಲೂಕು ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಹಾಗೂ ವಿಜ್ಞಾನ ನಾಟಕಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಕಲಬುರಗಿ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ ಸ್ಪರ್ಧಾಳುಗಳನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಲಬುರಗಿ ದಕ್ಷಿಣ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಡಾ. ಪ್ರಕಾಶ ರಾಠೋಡ ಮಾತನಾಡಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದಲ್ಲಿ ಆಸಕ್ತಿ ಹಾಗೂ ಕುತೂಹಲವಿರಬೇಕು. ಶಿಕ್ಷಕರು ಹೇಳಿದ ಪ್ರತಿ ವಿಚಾರವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಪ್ರಿನ್ಸಿಪಾಲ್ ಸಿದ್ದಪ್ಪ ಭಗವತಿ, ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು. ವಿಜ್ಞಾನ ವಿಚಾರ ಗೋಷ್ಠಿ ಸ್ಪರ್ಧೆಯಲ್ಲಿ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ವಿದ್ಯಾರ್ಥಿ ಶ್ರೇಯಸ್ ಸಿದ್ರಾಮಪ್ಪ ಪ್ರಥಮ ಸ್ಥಾನ, ಪಟ್ಟಣ ಸರಕಾರಿ ಪ್ರೌಢ ಶಾಲೆಯ ಮಲ್ಲಮ್ಮ ಮಡಿವಾಳ ದ್ವಿತೀಯ ಸ್ಥಾನ ಹಾಗೂ ಕಾಳಗನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರಾಹುಲ್ ಬೀರಪ್ಪ ತೃತೀಯ ಸ್ಥಾನ ಪಡೆದರು.

ವಿಜ್ಞಾನ ನಾಟಕಗಳ ಸ್ಪರ್ಧೆಯಲ್ಲಿ ಕಲಬುರಗಿಯ ಶ್ರೀ ಗೊಲ್ಲಾಳೇಶ್ವರ ಪ್ರೌಢ ಶಾಲೆ ಪ್ರಥಮ ಸ್ಥಾನ, ಕಾಳಗನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆ ದ್ವಿತೀಯ ಸ್ಥಾನ ಪಡೆದರೆ, ವಿವೇಕಾನಂದ ವಿದ್ಯಾ ನಿಕೇತನ ಶಾಲೆ ಹಾಗೂ ಜೋಗೂರ ಸರಕಾರಿ ಪ್ರೌಢ ಶಾಲೆ ತೃತೀಯ ಸ್ಥಾನ ಹಂಚಿಕೊಂಡರು.

ಸ್ಪರ್ಧೆಗಳ ನಿರ್ಣಾಯಕರಾಗಿ ವಿಜ್ಞಾನ ಶಿಕ್ಷಕರಾದ ಸಂತೋಷ ಕುಲಕರ್ಣಿ, ಅರುಣಾ ದೇಸಾಯಿ, ಅರ್ಚನಾ ಬಿರಾದಾರ ಹಾಗೂ ವನಮಾಲಾ ದಂಗಾಪೂರ ಆಗಮಿಸಿದ್ದರು. ಶಿಕ್ಷಣ ಸಂಯೋಜಕರು ಹಾಗೂ ನೋಡಲ್ ಅಧಿಕಾರಿ ಶಿವಮೂರ್ತಪ್ಪ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಬಸವರಾಜ ಗುಂಜಾಳ, ರಾಜಕುಮಾರ ಪಾಟೀಲ್, ಅನ್ನಪೂರ್ಣ, ಶ್ರೀಕಾಂತ, ವಿಜಯಕುಮಾರ, ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಉಪ ಪ್ರಾಚಾರ್ಯ ಪ್ರಸಾದ ಜಿ. ಕೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.