ಶಾಲಾ ಸಂಸತ್ ರಚನೆಯಿಂದ ಮಕ್ಕಳಿಗೆ ಚುನಾವಣಾ ಪ್ರಜ್ಞೆ

ಔರಾದ :ಜು.24: ವಿದ್ಯಾರ್ಥಿಗಳಿಗೆ ಚುನಾವಣಾ ಅರಿವು ಮೂಡಿಸುವ ಹಾಗೂ ವಿದ್ಯಾರ್ಥಿ ಸಂಘದ ರಚನೆಗಾಗಿ ತಾಲೂಕಿನ ಎಕಲಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವಿಎಂ ಮಾದರಿ ಮತಯಂತ್ರದ ಮೂಲಕ ಮತ ಚಲಾಯಿಸಿ ಶಾಲಾ ಸಂಸತ್ತಿಗೆ ಚುನಾವಣೆ ನಡೆಸಿರುವುದು ಎಲ್ಲರ ಗಮನ ಸೆಳೆಯಿತು.

ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ನಡೆಯಲಿರುವ ಸಾರ್ವಜನಿಕ ಚುನಾವಣೆ ಮಾದರಿಯಲ್ಲಿ ಶಾಲೆಯಲ್ಲಿ ಸಂಸತ್ತು ಚುನಾವಣೆಯಲ್ಲಿ ಭಾಗವಹಿಸಿದ್ದರು. ಶಾಲಾ ಮುಖ್ಯಶಿಕ್ಷಕ ಪ್ರಭು ಬಾಳೂರೆ ಚುನಾವಣಾಧಿಕಾರಿಯಾಗಿ, ಸಮಾಜ ವಿಷಯದ ಬೋಧಕ ಅಂಕುಶ ಪಾಟೀಲ್ ಸಹಾಯಕ ಚುನಾವಣಾಧಿಕಾರಿಯಾಗಿ, ಸಿಆರ್‍ಪಿ ಮಹಾದೇವ ಘುಳೆ ಸೆಕ್ಟರ್ ಅಧಿಕಾರಿಯಾಗಿ, ಶಿಕ್ಷಕರಾದ ಜೈಸಿಂಗ ಠಾಕೂರ್, ವೀರಶೆಟ್ಟಿ ಗಾದಗೆ, ಬಾಲಾಜಿ ಅಮರವಾಡಿ, ಕಿರಣ ಹಾಗೂ ಸಿದ್ದೇಶ್ವರಿ ಮತ್ತು ರಮೇಶ ಹಿಪ್ಪಳಗಾವೆ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.

ಶಾಲಾ ಸಂಸತ್ತು ರಚನೆ ಮಾಡಿ ಚುನಾವಣೆ ಪ್ರಕ್ರಿಯೆ ಅಂತಿಮಗೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಉಪಕರಣಗಳ ಬಳಕೆ ಮೆರುಗು ಹೆಚ್ಚಿಸಿತು. ಚುನಾವಣೆಗೆ ಅಗತ್ಯವಾದ ವಿವಿಧ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳ ಪಾತ್ರ ನಿರ್ವಹಿಸಲಾಗಿ, ಶಿಕ್ಷಕ ಬಾಲಾಜಿ ಅಮರವಾಡಿ ಮೊಬೈಲ್ ???ಪ್ ಬಳಸಿ ಟ್ಯಾಬ್‍ನಲ್ಲಿ ಮತಯಂತ್ರ ಮತ್ತು ಕಂಟ್ರೋಲ್ ಯೂನಿಟ್‍ಗಳು ವಿನ್ಯಾಸಗೊಳಿಸಿದ್ದು ಗಮನ ಸೆಳೆಯಿತು.
ವಿಧಾನಸಭೆ, ಲೋಕಸಭೆ ಚುನಾವಣೆ ಮಾದರಿಯಲ್ಲಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಪ್ರಚಾರಕ್ಕೆ ಅವಕಾಶ, ಮತದಾನ ಹೀಗೆ ಎಲ್ಲ ಹಂತಗಳನ್ನು ಶಾಲಾ ಸಂಸತ್ತಿನ ಚುನಾವಣಾ ಪ್ರಕ್ರಿಯೆಯನ್ನು ರೂಪಿಸಲಾಗಿತ್ತು. ಅಲ್ಲದೇ ಪ್ರಾಥಮಿಕ ಹಂತದಿಂದ ಇಂತಹ ಪ್ರಾಯೋಗಿಕ ಶಿಕ್ಷಣ ಒದಗಿಸುತ್ತಿರುವುದು ನಿಜಕ್ಕೂ ಅತೀವ ಸಂತಸ ತಂದಿದೆ ಎಂದು ಶಾಲೆಯ ಚುನಾವಣಾ ಪೂರ್ವ ತಯಾರಿ ವೀಕ್ಷಿಸಿದ ಗ್ರಾಮದ ಯುವ ಮುಖಂಡರಾದ ಯುನುಸ್ ಹಾಗೂ ರಮೇಶ ಪಾಂಚಾಳ ಅಭಿಪ್ರಾಯಪಟ್ಟರು.

ಮತದಾನ ಪ್ರಕ್ರಿಯೆ ಮುಕ್ತಾಯದ ನಂತರ ಮತಯಂತ್ರದಲ್ಲಿ ಅಭ್ಯರ್ಥಿಗಳ ಫಲಿತಾಂಶ ಅಡಗಿದ್ದು, ಸೋಮವಾರ ಫಲಿತಾಂಶ ಘೋಷಣೆ ಮಾಡಲಾಗುವುದು, ನಂತರ ಪ್ರಮಾಣ ವಚನ ಸ್ವೀಕಾರ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ನೆರವೇರಿಸಲಾಗುವುದು ಎಂದು ಸಹಾಯಕ ಚುನಾವಣಾ ಅಧಿಕಾರಿ ಅಂಕುಶ ಪಾಟೀಲ್ ತಿಳಿಸಿದ್ದಾರೆ.


ನಮ್ಮ ಶಾಲೆಯಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಮತದಾನ ಮಾಡಿದ್ದು ಬಹಳ ಖುಷಿ ನೀಡಿತು. ಅಲ್ಲದೇ ಚುನಾವಣೆ ಹೇಗೆ ನಡೆಸುತ್ತಾರೆ ಎಂಬ ಕುತೂಹಲ ದೂರವಾಯಿತು. ಶಾಲೆಯಲ್ಲಿನ ಎಲ್ಲಾ ಮಕ್ಕಳು ಮತದಾನ ಮಾಡಿದೆವು. ಶಿಕ್ಷ ಕರು ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

ಅಯುಬ್ ಮನ್ಸೂರ್ ಮುಲ್ಲಾ,

7ನೇ ತರಗತಿ ವಿದ್ಯಾರ್ಥಿ

ಚುನಾವಣೆ ಎಂಬುದು ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ರಚನೆ ಮಾಡಿಕೊಳ್ಳಲು ನಡೆಯುವಂತಹ ಪ್ರಕ್ರಿಯೆ, ಈ ನಿಟ್ಟಿನಲ್ಲಿ ನಮಗೆ ಚುನಾವಣೆ ಹೇಗೆ ನಡೆಯುತ್ತದೆ, ನಾವು ಹೇಗೆ ಮತದಾನ ಮಾಡಬೇಕು, ಎಂದೆಲ್ಲಾ ಕಲಿಸಿದ್ದಾರೆ.

ಸಾಯಿಕುಮಾರ,
7ನೇ ತರಗತಿ ವಿದ್ಯಾರ್ಥಿ