ಶಾಲಾ ಸಂಸತ್ ಮಂತ್ರಿ ಮಂಡಲ ಉದ್ಘಾಟನೆ

ತುಮಕೂರು, ಆ. ೩- ನಗರದ ಪೋದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ೨೦೨೨-೨೩ನೇ ಸಾಲಿನ ಶೈಕ್ಷಣಿಕ ವರ್ಷದ ನೂತನ ಶಾಲಾ ಸಂಸತ್ ಮಂತ್ರಿಮಂಡಲದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಜೀವ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆಸ್ತೂರು ಎಸ್. ಗಿರೀಶ್ ಅವರು ಶಾಲಾ ಸಂಸತ್ ಮಂತ್ರಿ ಮಂಡಲದ ಚುನಾವಣೆಯಲ್ಲಿ ಆಯ್ಕೆಯಾದ ನಾಯಕ ಕುಮಾರ ರಾಜೇಶ್ ಮತ್ತು ನಾಯಕಿ ಕು. ಸೃಷ್ಟಿ ಮತ್ತು ಉಪವಿಭಾಗಗಳ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಿದರು.
ವಿದ್ಯಾರ್ಥಿ ಮಂತ್ರಿಮಂಡಲದ ಸದಸ್ಯರು ತಮ್ಮ ಕರ್ತವ್ಯಗಳು, ಶಾಲೆಯ ನಿಯಮಗಳು ಹಾಗೂ ನಿಬಂಧನೆಗಳಿಗೆ ಬದ್ಧರಾಗಿರುವುದಾಗಿ ಹಾಗೂ ನಿಷ್ಠೆ, ಸತ್ಯ, ಮೌಲ್ಯಗಳನ್ನು ಹೆಚ್ಚು ಗೌರವಿಸುವ ಪ್ರತಿಜ್ಞೆ ಮಾಡಿದರು.
ಶಾಲಾ ಪರಿಷತ್ತಿನ ಯುವ ನಾಯಕರನ್ನು ಅಭಿನಂದಿಸಿದ ಡಾ.ಕೆಸ್ತೂರು ಎಸ್. ಗಿರೀಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಪರಿಶ್ರಮದೊಂದಿಗೆ ಅಧ್ಯಯನ ಮಾಡಬೇಕು. ಜತೆಗೆ ತಮ್ಮ ಪ್ರತಿಭೆಯನ್ನು ಹೊರ ಹೊಮ್ಮಿಸಬೇಕು ಎಂದರು.
ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಮುಖ್ಯವಾಗಿ ಐದು ಪ್ರಮುಖ ಕ್ಷೇತ್ರಗಳಾದ ಶಿಸ್ತು, ಸಮರ್ಪಣೆ, ವೈವಿಧ್ಯತೆ, ನಿರ್ಣಯ ಮತ್ತು ನಿರ್ದೇಶನಗಳ ಅಡಿಯಲ್ಲಿ ಕೆಲಸ ಮಾಡುವಂತೆ ಅವರು ಸಲಹೆ ನೀಡಿದರು.
ಶಾಲೆಯ ಪ್ರಾಂಶುಪಾಲರಾದ ಡಾ. ಲವ ಎಂ. ಬಿ. ಅವರು ಶಾಲಾ ಪರಿಷತ್ ಸದಸ್ಯರನ್ನು ಅಭಿನಂದಿಸಿ, ವಿದ್ಯಾರ್ಥಿಗಳು ಸವಾಲುಗಳ ಮೂಲಕ ಅವಕಾಶಗಳನ್ನು ಪಡೆದುಕೊಂಡು ಇತರರಿಗೆ ಮಾದರಿಯಾಗಿ ಬದುಕುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪೋದಾರ್ ಶಾಲೆಯ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ಪೋಷಕರು ಭಾಗವಹಿಸಿದ್ದರು.