ಶಾಲಾ ಶುಲ್ಕಕ್ಕಾಗಿ ಮಕ್ಕಳಿಗೆ ಕಿರುಕುಳ: ಪೋಷಕರ ದೂರು

ಹುಣಸೂರು,ಸೆ.21:- ನಗರದ ಪ್ರತಿಷ್ಠಿತ ಖಾಸಗಿ ಶಾಸ್ತ್ರಿ ವಿದ್ಯಾ ಸಂಸ್ಥೆ ವತಿಯಿಂದ ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ಕಿರುಕುಳವನ್ನು ಅಲ್ಲಿನ ಮಕ್ಕಳು ಹಾಗೂ ಪೋಷಕರು ಅನುಭವಿಸುತ್ತಿರುವ ಬಗ್ಗೆ ಹಲವಾರು ಪೋಷಕರು ದೂರುತ್ತಿದ್ದಾರೆ.
ಶಾಲಾ ಶುಲ್ಕ ಕಟ್ಟದ ಮಕ್ಕಳನ್ನು ಇತ್ತಿಚಿಗೆ ಅಸ್ಲೆಂಬಿಯಲ್ಲಿ ನಿಲ್ಲಿಸಿ ಇತರೆ ಮಕ್ಕಳ ಸಮ್ಮುಖದಲ್ಲಿ ಶುಲ್ಕ ಪಾವತಿ ಮಾಡದಿದವರಿಗೆ ಪ್ರವೇಶ ಪತ್ರ ನೀಡುವುದಿಲ್ಲ ಹಾಗೂ ಪರೀಕ್ಷೆಗೆ ಕೂರಿಸುವುದಿಲ್ಲ ಎಂದು ಆಡಳಿತ ಮಂಡಳಿ ಹಾಗೂ ಶಿಕ್ಷಕರು ಬೆದರಿಕೆ ಹಾಕಿರುವುದರ ಜೊತೆ ಶಾಲೆಯಿಂದ ಹೊರ ಹಾಕುವ ಬೆದರಿಕೆ ಹಾಕಿರುವುದು ಮಕ್ಕಳಿಗೆ ಮಾನಸಿಕ ಹಿಂಸೆಯಾಗಿದ್ದು ಇತರೆ ಸಹಪಾಠಿಗಳೊಂದಿಗೆ ಬೆರೆಯಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ.
ಕಳದೆ ಬಾರಿ ಕರೊನಾ ಸಂಕಷ್ಟದಲ್ಲೂ ಬಹುತೇಕ ಪೋಷಕರು ಪೂರ್ತಿ ಹಣಕಟ್ಟಿದ್ದು ಸರ್ಕಾರದ ನಿಯಮಕ್ಕಿಂತ ಹೆಚ್ಚುವರಿ ಹಣವನ್ನು ಪೋಷಕರಿಂದ ವಸೂಲಿ ಮಾಡಿರುವ ಬಗ್ಗೆ ಹಲವಾರು ಪೋಷಕರು ದೂರು ನೀಡಿ ಸುದ್ದಿಗೋಷ್ಠಿ ಕೂಡ ನಡೆಸಿದರು.
ಮಕ್ಕಳಿಗೆ ಕಿರುಕುಳ ಸಲ್ಲ: ಬಿ.ಇ.ಓ
ಯಾವುದೇ ವಿದ್ಯಾಸಂಸ್ಥೆಯಾಗಲ್ಲಿ ಶುಲ್ಕಕ್ಕಾಗಿ ಅದರಲ್ಲೂ ಪರೀಕ್ಷಾ ಸಮಯದಲ್ಲಿ ಮಕ್ಕಳನ್ನು ಅವಮಾನಿಸುವುದು ತಪ್ಪು, ಕರೆ ಮಾಡಿ ಅಥವಾ ಪೋಷಕರ ಶಾಲೆಗೆ ಕರೆಸಿ ಶುಲ್ಕ ಕೇಳಿ ಪಡೆಯಲ್ಲಿ ಎಂದು ತಾಲ್ಲೂಕು ಶಿಕ್ಷಣಾಧಿಕಾರಿ ಎಸ್. ರೇವಣ್ಣ ಎಚ್ಚರಿಸಿದ್ದಾರೆ.
ಖಾಸಗಿ ಶಾಲೆ ವ್ಯಾಮೋಹ
ಬಹುತೇಕ ಪೋಷಕರು ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಓದಿ ಸರ್ಕಾರಿ ಸಂಬಳ ಪಡೆಯುವ ಅಧಿಕಾರಿಗಳು, ಸಿಬ್ಬಂದಿಗಳು ಅದರಲ್ಲೂ ಸರ್ಕಾರಿ ಶಾಲಾ ಶಿಕ್ಷಕರೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವಾಗ ಇತರೆ ಸಮುದಾಯದ ಪೋಷಕರು ಹೇಗೆ ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸ ಇಡಲು ಸಾಧ್ಯ. ಸರ್ಕಾರ ಕೂಡ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುವುದರ ಜೊತೆ ಇತರೆ ಕೆಲ ರಾಜ್ಯದಂತೆ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವ ಕಠಿಣ ನಿರ್ಧಾರ ತೆಗೆದುಕೊಂಡು ಅನುಷ್ಠಾನಕ್ಕೆ ತಂದರೆ, ಇತರೆ ಮಧ್ಯಮ ವರ್ಗದ ಪೋಷಕರಿಗೂ ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸ ಮೂಡುವುದರೊಂದಿಗೆ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳ ಹೆಡ್ಡೆಮುರಿ ಕಟ್ಟಬಹುದು.