ಚಿತ್ತಾಪುರ:ಜು.10: ತಾಲೂಕಿನ ಕಮರವಾಡಿ ಗ್ರಾಪಂ ವ್ಯಾಪ್ತಿಯ ಆಲೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೇಲ್ಚಾವಣಿ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಜೆಸ್ಕಾಂ ಇಲಾಖೆ ಅಧಿಕಾರಿಗಳು ರವಿವಾರ ತೆರವುಗೊಳಿಸಿದ್ದಾರೆ.
ಶಾಲಾ ಮೇಲ್ಚಾವಣಿಯ ಮೇಲೆ ಹೈ ವೋಲ್ಟೇಜ್ ವಿದ್ಯುತ್ ಸಂಪರ್ಕ ಹಾದು ಹೋಗಿತ್ತು. ಇದರಿಂದ ಶಾಲೆಯ ಮಕ್ಕಳು ಹಾಗೂ ಪೆÇೀಷಕರಲ್ಲಿ ಆತಂಕ ಉಂಟಾಗಿತ್ತು. ಮಕ್ಕಳು ಜೀವ ಭಯದಲ್ಲಿ ಪಾಠ ಆಲಿಸುವ ಆತಂಕ ಎದುರಾಗಿತ್ತು. ಹಲವು ವರ್ಷಗಳ ಸಮಸ್ಯೆ ಇದಾಗಿದ್ದು, ಅಪಾಯದ ಸೂಚನೆ ತೋರುತ್ತಿದೆ ಇದನ್ನು ಬೇರೆಡೆ ಹಾಕಬೇಕು ಎನ್ನುವ ಗ್ರಾಮಸ್ಥರ ಮನವಿ ಆಲಿಸಿದ ಜೆಸ್ಕಾಂ ಅಧಿಕಾರಿಗಳು ಸಮಸ್ಯೆ ಪರಿಹರಿಸಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ಜೆಸ್ಕಾಂ ಇಲಾಖೆಯ ಗ್ರಾಮೀಣ ವಿಭಾಗದ ಅಧಿಕಾರಿ ರವಿ ಕುಲಕರ್ಣಿ, ಈ ಸಮಸ್ಯೆಯನ್ನು ವಾರದೋಳಗೆ ಪರಿಹರಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅದರ ಅನ್ವಯ ಅಧಿಕಾರಿಗಳು ವಿದ್ಯುತ್ ತಂತಿ ಹಾಗೂ ಕಂಬಗಳನ್ನು ಬೇರೆಡೆ ಸ್ಥಳಾಂತರಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.
ಈ ವೇಳೆ ಪ್ರತಿಕ್ರಿಯಿಸಿದ ಜೆಸ್ಕಾಂ ಇಲಾಖೆಯ ಗ್ರಾಮೀಣ ಭಾಗದ ಜೆಇ ನಾಗೇಶ ವಿ.ಕುಂಬಾರ, ವಿದ್ಯುತ್ ಸಮಸ್ಯೆ ಉಂಟಾದರೆ ತ್ವರಿತಗತಿಯಲ್ಲಿ ಪರಿಹರಿಸುತ್ತೇವೆ. ನಮ್ಮ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿರುವ ವಿದ್ಯುತ್ ಸಮಸ್ಯೆ ಪರಿಹರಿಸಲು ದುರಸ್ಥಿ ಕಾರ್ಯ ಕೈಗೊಳ್ಳುತ್ತಿದ್ದೇವೆ, ವಿದ್ಯುತ್ ಕೈಕೊಟ್ಟರೆ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದರು.