ಶಾಲಾ ಮಕ್ಕಳಿಗೆ ಬಿಳಿಹಾಳೆ ಬಂಡಲ್ ವಿತರಣೆ

ಕೋಲಾರ, ಆ.೧: ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಇಡೀ ವರ್ಷಕ್ಕೆ ರೂಪಣಾತ್ಮಕ ಚಟುವಟಿಕೆಗಳನ್ನು ನಡೆಸಲು ಅಗತ್ಯವಾದಷ್ಟು ಪ್ರಮಾಣದ ಬಿಳಿ ಹಾಳೆಗಳ ಬಂಡಲ್‌ಗಳನ್ನು ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಕೊಡುಗೆಯಾಗಿ ವಿತರಿಸಿದರು.
ತಮ್ಮ ಅಜ್ಜಿ ದಿವಂಗತ ನಾರಾಯಣಮ್ಮ ಸ್ಮರಣಾರ್ಥ ಅವರ ಪುಣ್ಯತಿಥಿಯಂದು ಪ್ರತಿವರ್ಷವೂ ಮಕ್ಕಳೊಂದಿಗೆ ಆಚರಿಸುವ ಅವರು, ಮಕ್ಕಳಿಗೆ ಅಗತ್ಯವಾದ ಶೈಕ್ಷಣಿಕ ಪರಿಕರಗಳನ್ನು ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ.
ತಮ್ಮ ಅಜ್ಜಿ ಅನುಭವಿಸಿದ ಕಷ್ಟದ ದಿನಗಳನ್ನು ಸ್ಮರಿಸಿದ ಅವರು, ಮಕ್ಕಳು ಕಷ್ಟವನ್ನು ಮೆಟ್ಟಿ ಸಾಧಕರಾಗಿ ಸಮಾಜದಲ್ಲಿ ಉತ್ತಮ ಸಾಧನೆ ಮಾಡಲು ಕಿವಿಮಾತು ಹೇಳಿ, ಎಸ್ಸೆಸ್ಸೆಲ್ಸಿಯಲ್ಲಿ ೬೦೦ಕ್ಕಿಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ೧೦ ಸಾವಿರ ರೂ ಬಹುಮಾನ ನಿಡುವುದಾಗಿ ಘೋಷಿಸಿದರು.
ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್, ನಾರಾಯಣಸ್ವಾಮಿ ಅವರು ಕೊಡುಗೈ ದಾನಿಯಾಗಿದ್ದು, ಸರ್ಕಾರಿ ಶಾಲೆ ಮಕ್ಕಳ ಕುರಿತು ಅಪಾರ ಪ್ರೀತಿ ಹೊಂದಿದ್ದಾರೆ, ಅನೇಕ ಮಕ್ಕಳ ಕಲಿಕೆಗೆ ನೆರವಾಗಿದ್ದಾರೆ ಎಂದು ತಿಳಿಸಿ, ಅವರಿಗೆ ದೇವರು ಉತ್ತಮ ಆರೋಗ್ಯ ನೀಡಲಿ ಎಂದು ಹಾರೈಸಿದರು.
ಶಾಲೆಯ ಮುಖ್ಯಶಿಕ್ಷಕ ಮಹದೇವನಾಯಕ್, ಸರ್ಕಾರಿ ಶಾಲೆಗಳ ಮಕ್ಕಳಿಗೆ ನೆರವಾಗುವ ಹೃದಯವಂತಿಕೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಇಂತಹ ದಾನಿಗಳ ನೆರವು ಶಾಲೆಗೆ ಮತ್ತಷ್ಟು ಹರಿದುಬರಲಿ ಎಂದು ತಿಳಿಸಿ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಾಮಚಮದ್ರಪ್ಪ ಹಾಗೂ ಎರಡೂ ಶಾಲೆಯ ಶಿಕ್ಷಕರು ಹಾಜರಿದ್ದರು.