ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಧಾರವಾಡ,ಜು21 : ಧಾರವಾಡದ ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರ ವರ ಗೆಳೆಯರ ಬಳಗದ ವತಿಯಿಂದ ಧಾರವಾಡದ ತಡಕೋಡ ಗ್ರಾಮದ ಐದು ಸರಕಾರಿ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ಉರ್ದು ಶಾಲೆಯ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ರಾಜ್ಯದ ಸರಕಾರಿ ಶಾಲೆಗಳು ಸದೃಢವಾದರೆ ಮಾತ್ರ ಸಮರ್ಥ ಹಾಗೂ ಸುಂದರ ಸಮಾಜ ನಿರ್ಮಾಣ ಮಾಡಬಹುದು. ಆ ನಿಟ್ಟಿನಲ್ಲಿ ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗ ಧಾರವಾಡ ಗ್ರಾಮೀಣ ಭಾಗದ ಸಾವಿರಾರು ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವ ಮೂಲಕ ಸಣ್ಣ ಅಳಿಲು ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದರು.
ಜನಜಾಗೃತಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ, ಸಮಾಜದ ಕಟ್ಟಕಡೆಯ ಮಗವೂ ಶಿಕ್ಷಣದಿಂದ ವಂಚಿತವಾಗಬಾರದು. ಎಲ್ಲಾ ಮಕ್ಕಳು ಶಾಲೆಯ ಒಳಗಡೆ ಇರಬೇಕು ಎಂಬ ಸದಾಶಯದಿಂದ ಧಾರವಾಡ ತಾಲೂಕಿನ ಎಲ್ಲಾ ಸರಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಗುತ್ತಿದೆ. ಈ ಪೈಕಿ ಈಗಾಗಲೇ 35ಕ್ಕೂ ಗ್ರಾಮಗಳ
50ಕ್ಕೂ ಸರಕಾರಿ ಶಾಲೆಯ ಸುಮಾರು 12 ಸಾವಿರಕ್ಕೂ ಅಧಿಕ ಮಕ್ಕಳಿಗೆ ಅಂದಾಜು 60 ಸಾವಿರ ನೋಟ್ ಬುಕ್ ವಿತರಣೆ ಮಾಡಲಾಗಿದ್ದು, ಧಾರವಾಡ ತಾಲೂಕಿನ ತಡಕೋಡ ಗ್ರಾಮದ 5 ಸರಕಾರಿ ಶಾಲೆಯ 1271 ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಡಕೋಡ ಗ್ರಾಮದ ಶಾಲೆ ವತಿಯಿಂದ ಜನಜಾಗೃತಿ ಸಂಘ ಅಧ್ಯಕ್ಷರಾದ ಬಸವರಾಜ ಕೊರವರ ಅವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಮಾರಂಭದಲ್ಲಿ ತಡಕೋಡ ಗ್ರಾಮದ ಗ್ರಾಪಂ ಅಧ್ಯಕ್ಷರು, ಸದಸ್ಯರು, ಶಾಲಾ ಸುಧಾರಣಾ ಸಮಿತಿ ಪದಾಧಿಕಾರಿಗಳು, ಗುರು ಹಿರಿಯರು, ಶಾಲೆಯ ಸಿಆರ್ ಪಿ, ಎಸ್ ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.