ಶಾಲಾ ಮಕ್ಕಳಿಗೆ ದೃಶ್ಯ ಪ್ರಜ್ಞೆ ಮೂಡಿಸಬೇಕು

ಕಲಬುರಗಿ,ಮಾ.15: ಇಂದಿನ ಮಕ್ಕಳು ಓದೋದಕ್ಕಿಂತ ಹೆಚ್ಚಿಗೆ ನೋಡುವುದರ ಮೂಲಕ ಕಲಿಯುತ್ತಾರೆ. ಹಾಗಾಗಿ ಶಾಲಾ ಮಕ್ಕಳಲ್ಲಿ ದೃಶ್ಯ ಪ್ರಜ್ಞೆ ಮೂಡಿಸುವುದು ಇಂದಿನ ಜರೂರಿಯಾಗಿದೆ ಎಂದು ಖ್ಯಾತ ಚಿತ್ರಕಲಾದ ಶ್ರೀ ಬಸವರಾಜ ಎಲ್ ಜಾನೆ ಪ್ರತಿಪಾದಿಸಿದರು.
ಚಿತ್ತಾಪುರ ತಾಲೂಕಿನ ಪೇಠಶಿರೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆಯು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ ‘ಮಕ್ಕಳ ದೃಶ್ಯ ಕಲೆ: ಚಿಂತನ-ಮಂಥನ’ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು

 ಶಾಲಾ ಮಕ್ಕಳು ಹೊಸ ಹೊಸ ವಿಷಯಗಳನ್ನು ಹೊಸ ದೃಷ್ಟಿಕೋನದಿಂದ ನೋಡಿ ಕಲಿಯಬೇಕೆನ್ನುವ ಉತ್ಸಾಹ ಉಳ್ಳವರು ಹಾಗಾಗಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಚಿತ್ರ-ಶಿಲ್ಪ, ಕರಕುಶಲ ಕಲೆ ಮತ್ತು ಸ್ಥಳೀಯ ಜನಪದ ಕಲಾ ಪ್ರಕಾರಗಳನ್ನು ತೋರಿಸುವ ಮುಖಾಂತರ ದೃಶ್ಯ ಪ್ರಜ್ಞೆ ಮತ್ತು ಸೌಂದರ್ಯ ಪ್ರಜ್ಞೆದ ಬೀಜ ಬಿತ್ತುವುದು ಅನಿವಾರ್ಯ ಎಂಬುದನ್ನು ಶಿಕ್ಷಕರು ಮಣಗಾಣಬೇಕಾಗಿದೆ ಎಂದರು.
  ಮೊದಲನೇ ಗೋಷ್ಠಿಯಲ್ಲಿ ಕಲಾವಿದ, ನಿರ್ದೇಶಕ ಅರುಣ ಬಿ.ಟಿ ‘ಮಕ್ಕಳ ಕಲಿಕೆಗೆ ದೃಶ್ಯ ಕಲೆಯ ಅಗತ್ಯತೆ’ ಕುರಿತು ಮಾತನಾಡಿ ಮಕ್ಕಳು ದೃಶ್ಯಕಲೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸೃಜನಶೀಲತೆ, ಆತ್ಮವಿಶ್ವಾಸ ಸಮಸ್ಯೆ ಬಿಡಿಸುವುದು, ಅವಿರತ ಪ್ರಯತ್ನ ಮಾಡುವುದು, ಗಮನ ಕೇಂದ್ರಿಕರಿಸುವುದು, ಮೌಖಿಕ ಸಂವಹನ ಮತ್ತು ರಚನಾತ್ಮಕ ಪ್ರತಿಕ್ರಿಯೆಗಳನ್ನು ನೀಡಲು ಸಹಾಯಕವಾಗುತ್ತದೆ ಎಂದರು.
   ಎರಡನೇ ಗೋಷ್ಠಿಯಲ್ಲಿ ಹಿರಿಯ ಚಿತ್ರಕಲಾವಿದೆ ಮಂಜುಳಾ ಬಿ. ಜಾನೆ ‘ಮಕ್ಕಳ ಮಾನಸಿಕ ಬೆಳವಣಿಗೆಗಾಗಿ’ ಚಿತ್ರಕಲಾ ಚಟುವಟಿಕೆಗಳು ಕುರಿತು ಮಾತನಾಡಿದರು. ಮೂರನೇ ಗೋಷ್ಠಿಯಲ್ಲಿ ಡಾ. ಎಂ. ಬಿ. ಕಟ್ಟಿ ‘ಮಕ್ಕಳ ಕಲಿಕೆಯಲ್ಲಿ ಸ್ಥಳೀಯ ಜಾನಪದ ಕಲೆಗಳ ಪಾತ್ರ’ ಕುರಿತು ಮಾತನಾಡಿದರು. ನಾಲ್ಕನೇ ಗೋಷ್ಠಿಯಲ್ಲಿ ಚಿತ್ರಕಲಾ ಶಿಕ್ಷಕ ಸೂರ್ಯಕಾಂತ ನಂದೂರ ಮಕ್ಕಳ ವಿವಿಧ ಚಲನಚಿತ್ರಗಳ ತುಣುಕುಗಳನ್ನು ತೋರಿಸಿ, ಮಕ್ಕಳೊಂದಿಗೆ ಚರ್ಚಿಸಿದರು. ಪೇಠಶಿರೂರನ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಲಾಲ್ ಅಹ್ಮದ್ ಅಧ್ಯಕ್ಷತೆ ವಹಿಸಿದರು. ಸರ್ಕಾರಿ ಪ್ರೌಢಶಾಲೆ ಪೇಠಶಿರೂರನ ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ್ ಬಾಬನಕ್‍ರ್ ಇದ್ದರು. ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ ಪಿ ಸ್ವಾಗತಿಸಿ, ಪ್ರಸ್ತಾಪಿಕವಾಗಿ ಮಾತನಾಡಿದರು. ರಾಜಶೇಖರ್ ಎಸ್ ಹಿರೇಮಠ ವಂದಿಸಿದರು.