ಶಾಲಾ ಮಕ್ಕಳಿಗೆ ಕಂಠಪಾಠ ಹೋಗಲಾಡಿಸುವ ಉದ್ದೇಶವೆ ಕಲಿಕಾ ಹಬ್ಬ : ಮಾರುತಿ ಹುಜರತಿ

ಅಫಜಲಪುರ :ಜ.11: ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಶಿಕ್ಷಕರು ಮಾಡುವ ಕೇವಲ ಪಾಠ ಬೋಧನೆಯಿಂದ ಸಾಧ್ಯವಿಲ್ಲ ಶಿಕ್ಷಕರಾದವರು ಮಕ್ಕಳಲ್ಲಿ ಸೃಜನಶೀಲತೆ, ಸಂತಸದಾಯಕ ಕಲಿಕೆಯ ವಾತವರಣ ನಿರ್ಮಾಣ ಮಾಡಿದಾಗ ಮಾತ್ರ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಕೇವಲ ಮಕ್ಕಳಿಗೆ ಕಂಠ ಪಾಠಕ್ಕೆ ಸೀಮಿತವಾಗಬಾರದು ಹಾಗೂ ಕಂಠ ಪಾಠ ಹೋಗಲಾಡಿಸುವ ಉದ್ದೇಶದಿಂದ ಸರಕಾರ ಶಿಕ್ಷಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಸದ್ಯ ಮಕ್ಕಳಿಗಾಗಿ ಕಲಿಕಾ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರತಿ ಹೇಳಿದರು.

ತಾಲೂಕಿನ ಸರಕಾರಿ ಪಾಲಿಟೇಕ್ನಿಕಲ್ ಕಾಲೇಜಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಪಂಚಾಯತ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರಗಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ವತಿಯಿಂದ ಹಮ್ಮಿಕೊಂಡಿರುವ ಕಲಿಕಾ ಹಬ್ಬದ ಕಾರ್ಯಕ್ರಮದ ಪ್ರಯುಕ್ತ ಬ್ಲಾಕ್ ಮಟ್ಟದ ಸಂಪನ್ಮೂಲ ಶಿಕ್ಷಕರ ತರಬೇತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಕರ್ನಾಟಕದ ಶಿಕ್ಷಣ ಇಲಾಖೆಯ “ಸಮಗ್ರ ಶಿಕ್ಷಣ ಕರ್ನಾಟಕ’ ಯೋಜನಾ ವಿಭಾಗವು ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲೇ ಮೊದಲ ಬಾರಿಗೆ “ಕಲಿಕಾ ಹಬ್ಬ’ ಎಂಬ ಚೇತೋಹಾರಿ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ. ಮಗುವಿನ ಕಲಿಕೆಯು ಸಂಪೂರ್ಣವಾಗಿ ಅನುಭವ ಜನ್ಯವಾಗಿರುವುದರ ಜತೆಗೆ ಮಗು ತನ್ನನ್ನು ತಾನು ಸ್ವತಃ ತೊಡಗಿಸಿಕೊಳ್ಳುವ ಸ್ವಕಲಿಕೆಯ ಕಾರ್ಯಕ್ರಮ ಇದಾಗಿದೆ.
ಆರಂಭದ ಹಂತವಾಗಿ ಇದೇ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ರಾಜ್ಯದ ಒಟ್ಟು 4,103 ಕ್ಲಸ್ಟರ್‍ಗಳಲ್ಲಿ ಕ್ಲಸ್ಟರ್‍ಮಟ್ಟದ “ಕಲಿಕಾ ಹಬ್ಬ’ಗಳು ಸಂಪನ್ನಗೊಳ್ಳಲಿವೆ. ರಾಜ್ಯದ ಸರಕಾರಿ ಶಾಲೆಯ 4ರಿಂದ 9ನೇ ತರಗತಿಯ ಮಕ್ಕಳು ಈ ಹಬ್ಬದ ಸಂಭ್ರಮದಲ್ಲಿ ತಮ್ಮನ್ನು ತಾವು ಮೈಮರೆತು ನಲಿಯಲಿದ್ದಾರೆ, ನಲಿಯುತ್ತಾ ಕಲಿಯುವವರಿದ್ದಾರೆ. ಇದಕ್ಕಾಗಿ ಈಗಾಗಲೇ ರಾಜ್ಯ, ಜಿಲ್ಲಾಮಟ್ಟದಲ್ಲಿ ವಿವಿಧ ತಾಲೂಕ ಮಟ್ಟದ ಕಾರ್ಯಾಗಾರಗಳು ನಡೆದಿದ್ದು, ಕಲಿಕಾ ಹಬ್ಬದ ಆಶಯವನ್ನು ಮಕ್ಕಳಿಗೆ ತಲುಪಿಸುವುದಕ್ಕಾಗಿ ಕಾರ್ಯತತ್ಪರರಾದ ಕ್ರಿಯಾಶೀಲ ಅಧಿಕಾರಿಗಳು ಮತ್ತು ಶಿಕ್ಷಕರ ಅತ್ಯುತ್ತಮ ತಂಡಗಳು ರಾಜ್ಯಾದ್ಯಂತ ಸಿದ್ಧಗೊಂಡಿವೆ.
ಕಲಿಕಾ ಹಬ್ಬ ಮಕ್ಕಳು ಸಂಭ್ರಮದಿಂದ, ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಒಡನಾಟದ ಕಲಿಕೆಯ ಮೂಲಕ ಪ್ರಶ್ನೆಗಳು, ಪ್ರಯೋಗಗಳು, ವೀಕ್ಷಣೆಗಳು ಹೀಗೆ ಅನುಭಾವಾತ್ಮಕವಾಗಿ ಕಲಿಯಲಿದ್ದಾರೆ. ಪರಸ್ಪರ ಚರ್ಚೆಗಳು, ಮುಕ್ತ ಸಂವಾದಗಳು, ಹಲವಾರು ಯೋಜನೆಗಳು, ಹಾಡು, ಹಸೆ, ನೃತ್ಯ, ನಾಟಕಗಳು ಇತ್ಯಾದಿ ಸುಮನೋಹರ ವಿಧಾನಗಳಿಂದ ಶಿಕ್ಷಕರ ನೆರವಿನಿಂದ ಮಗುವೇ ಸ್ವತಃ ವಿಮರ್ಶಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು, ಪ್ರಶ್ನೆ ಮಾಡುವುದನ್ನು ಕಲಿಕೆಯ ಆಸ್ಥೆಯ ಭಾಗವನ್ನಾಗಿಸಿಕೊಳ್ಳುವ ಮೂಲಕ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳಲಿದ್ದಾರೆ. ಇಲ್ಲಿ ಮಗುವಿನ ಪ್ರಶ್ನೆಯೇ ಪ್ರಜ್ಞೆಯಾಗಲಿದೆ! ಏಕೆಂದರೆ “ಕಲಿಕಾ ಹಬ್ಬ’ದ ಮೂಲ ಆಶಯವೇ “ಪ್ರಶ್ನೆಯು ಪ್ರಜ್ಞೆ ಯಾಗಲಿ’ ಎಂಬುದು. ಮಗು ತನ್ನನ್ನು ತಾನು ರಚನಾತ್ಮಕ ತರಗತಿಯೊಳಗೆ ತೊಡಗಿಸಿಕೊಳ್ಳಲಿದೆ. “ಕಲಿಕಾ ಹಬ್ಬ’ದ ಮೂಲ ಆಶಯವೇ ಇದು.
ಕಲಿಕಾ ಹಬ್ಬದಲ್ಲಿ ಮಗು “ಮಾಡು-ಆಡು’, “ಊರು ತಿಳಿಯೋಣ’, “ಕಾಗದ-ಕತ್ತರಿ’, “ಆಡು-ಹಾಡು’ ಎಂಬ ನಾಲ್ಕು ಗುಂಪುಗಳಲ್ಲಿ ಅನೇಕ ನಾವೀನ್ಯಪೂರ್ಣವಾದ ವಿಚಾರಗಳನ್ನು ಕಲಿಯಲಿದೆ. ಇಲ್ಲಿ ಮಗುವಿಗೆ “ಬೋರ್’ ಎನ್ನುವ ಪದವೇ ಹತ್ತಿರ ಸುಳಿಯಲಾರದು. ಹೆಜ್ಜೆಹೆಜ್ಜೆಗೂ ಮಗು ಚಟುವಟಿಕೆಗಳ ಮೂಲಕವೇ ತಾನು ಸ್ವತಃ ಅನುಭವಿಸಿ ಕಲಿಯುವುದರಿಂದ ಇಲ್ಲಾದ ಕಲಿಕೆಯನ್ನು ಪರೀಕ್ಷೆ ಬಿಡಿ- ಜೀವಮಾನಕ್ಕೂ ಮರೆಯಲಾರದು. ಜತೆಗೆ ಮುಖ್ಯವಾಗಿ, ತಾನು ಇಲ್ಲಿ ಕಲಿತದ್ದನ್ನು ತನ್ನ ಇತರ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದರಿಂದ ಈ ‘ಕಲಿಕಾ ಹಬ್ಬ ‘ ಒಂದು ನಿರ್ದಿಷ್ಟ ಅವಧಿಗೆ ಮುಗಿದು ಹೋಗದೇ ಅದು ಚಟುವಟಿಕೆಗಳಾಗಿ ನಿರಂತರವಾಗಿರಬೇಕು ಹೀಗಾಗಿ ತಾಲೂಕಿನಲ್ಲಿ 16 ಕ್ಲಸ್ಟರ್ ಇವೆ 1 ಕ್ಲಸ್ಟರ್ ನಿಂದ 5 ಜನ ಶಿಕ್ಷಕರು ಒಟ್ಟು 70 ಶಿಕ್ಷಕರು, 2 ದಿನಗಳ ತರಬೇತಿ ಪಡೆದು ಕ್ಲಸ್ಟರ್ ವಲಯದಲ್ಲಿ ಮಕ್ಕಳಿಗೆ ಕಲಿಕಾ ಹಬ್ಬದ ಮೂಲಕ ಶಿಕ್ಷಣ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಬಿಆರಸಿ . ವಿ.ವೈ.ಗುಡಮಿ, ಪ್ರಾಚಾರ್ಯ ಅನೀಲ , ಜಿಲ್ಲಾ ಸಂಪನ್ಮೂಲ ಅಧಿಕಾರಿ ಪರಮಾನಂದ ಸರಸಂಬಾ, ಬಿಆರಪಿಗಳಾದ ಭೀಮರಾಯ ದೊಡ್ಮನಿ, ನಾಗಣ್ಣ ಬೂದಿಹಾಳ, ಸಂತೋಷ ಹೆಗ್ಗಿ, ಶಿವಾನಂದ ಕಲಬುರಗಿ, ನವೀನಗೌಡ ಪಾಟೀಲ್, ಶಿವಾನಂದ ಗುಣಾರಿ, ಮಹಾದೇವ ಮೈಂದರ್ಗಿ,ಲಕ್ಷ್ಮಣ ನಡುವಿನಕೇರಿ, ಸಿದ್ದಪ್ಪ ಮ್ಯಾಳೇಸಿ, ಬಸವರಾಜ ಕಲ್ಲಾ, ಸಿಆರಸಿಗಳಾದ ನಯಾನಾ ಹ್ಯಾಟಿ, ಪ್ರಭಾವತಿ ಕಂದಗಲ್, ಸವಿತಾ ಮನ್ಮಿ, ಜ್ಯೋತಿ ಮಣ್ಣುರ, ಮಹಾದೇವಿ ದೇಸಾಯಿ,ವಿಜಯಕುಮಾರ ಸುರಪ್ಪನವರ, ಬಾಹುಬಲಿ ಮಾಲಗತ್ತಿ, ಜಗದೇವಪ್ಪ ಸಾತಲಗಾಂವ,ಸಂತೋಷ ಪೆÇದ್ದಾರ, ಗೀರಜಾ ಹಂಗರಗಿ, ಹಣಮಂತ ಪತ್ತಾರ ಪುಷ್ಪ ಚಲಗೇರಿ ಮುಂತಾದ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.