ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮೇ.28 ತಾಲೂಕಿನಾದ್ಯಂತ ಮೇ.31 ರಂದು ಶಾಲೆಗಳು ಪ್ರಾರಂಭವಾಗುತ್ತಿದ್ದು ಮಕ್ಕಳಿಗೆ ಸಿಹಿ ಊಟದ ಜೊತೆಗೆ ಉಚಿತವಾಗಿ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಸಿ ಆನಂದ್ ಹೇಳಿದರು.
ಪಟ್ಟಣದ ಬಿಇಓ ಕಚೇರಿಯಲ್ಲಿ ನಡೆದ ಮುಖ್ಯ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿ ಯಾವುದೇ ಮಗು ಶಾಲಾ ಇಂದ ಹೊರಗೆ ಉಳಿಯದಂತೆ 5 ವರ್ಷ 10 ತಿಂಗಳು ತುಂಬಿರುವ ಎಲ್ಲಾ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲೆ ಮಾಡಿಸಿಕೊಳ್ಳಲು ಕರೆ ನೀಡಿದರು. ಶಾಲೆ ಆರಂಭದ ಮುಂಚೆ ಶಾಲೆಯ ಸುತ್ತಮುತ್ತ ವಾತಾವರಣ ಹಾಗೂ ಕೊಠಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಸುಣ್ಣಬಣ್ಣ ಬಳಿಯುವಂತೆ ಶಿಕ್ಷಕರಿಗೆ ಸೂಚಿಸಿದರು. ಶಾಲೆಗಳ ಆರಂಭದಲ್ಲಿ ಸೇತುಬಂದು ಕಾರ್ಯಕ್ರಮ ಅನುಷ್ಠಾನ ಮಾಡುವುದರೊಂದಿಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಪರಿಹಾರ ಬೋಧನೆಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿಸುವುದರಿಂದ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣ ಜೊತೆಗೆ ವಿದ್ಯಾರ್ಥಿ ವೇತನ ಹಾಗೂ ಹಲವಾರು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಎಲ್ಲ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಮಧ್ಯಾಹ್ನ ಬಿಸಿ ಊಟ ನೀಡಲಾಗುವುದು ಎಂದರು.