ಶಾಲಾ ಪ್ರವಾಸ ಬಸ್ ಪಲ್ಟಿ; ೩ಮಕ್ಕಳಿಗೆ ಗಾಯ

ಹಾವೇರಿ.ಡಿ೨೬: ಕಳೆದೆರಡು ದಿನಗಳ ಹಿಂದೆ ದೇವದುರ್ಗದಲ್ಲಿ ಶಾಲಾ ಪ್ರವಾಸ ಬಸ್ ಪಲ್ಟಿಯಾಗಿದ್ದ ಘಟನೆ ಮಾಸುವ ಮುನ್ನವೇ ರಾಯಚೂರಿನ ಶಾಲಾ ಪ್ರವಾಸಿ ಬಸ್ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪುರ ಕ್ರಾಸ್ ಬಳಿ ಪಲ್ಟಿಯಾಗಿ ಮಕ್ಕಳು ಸೇರಿ ನಾಲ್ವರು ಗಾಯಗೊಂಡ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಬಸ್ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು, ಬಸ್ ಚಾಲಕ ಗಂಭೀರವಾಗಿ ಗಾಯಗೊಂಡು, ೧೨ ಮಕ್ಕಳಿಗೆ ಸಣ್ಣಪುಟ್ಟ ಗಾಯವಾದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪುರ ಕ್ರಾಸ್ ಬಳಿ ಮಂಗಳವಾರ ಬೆಳಗ್ಗೆ ೬ ಗಂಟೆಗೆ ನಡೆದಿದೆ. ಗಾಯಗೊಂಡ ಮಕ್ಕಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತಕ್ಕೀಡಾದ ಶಾಲಾ ಪ್ರವಾಸಿ ಬಸ್ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಸಜ್ಜನಗುಡ್ಡದ ಸರ್ಕಾರಿ ಶಾಲೆಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆಯ ಹಲವು ತಾಣಗಳಿಗೆ ಸಜ್ಜನಗುಡ್ಡದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪ್ರವಾಸ ಕೈಗೊಂಡಿದ್ದರು. ಇಲ್ಲಿನ ಉತ್ಸವ ರಾಕ್?ಗಾರ್ಡ್?ಗೆ ತೆರಳುತ್ತಿದ್ದಾಗ ಸವಣೂರು ತಾಲೂಕಿನ ಅಲ್ಲಿಪುರ ಕ್ರಾಸ್ ಬಳಿ ಬಸ್ ಅಚಾನಕ್ಕಾಗಿ ಉರುಳಿ ಬಿದ್ದಿದೆ.ಈ ವೇಳೆ ಬಸ್‌ನಲ್ಲಿ ೫೩ ವಿದ್ಯಾರ್ಥಿಗಳು, ೬ ಶಿಕ್ಷಕರು ಇದ್ದರು.
ಘಟನೆಯಲ್ಲಿ ಬಸ್ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಹುಬ್ಬಳ್ಳಿಯ ಕಿಮ್ಸ್? ಆಸ್ಪತ್ರೆಗೆ ರವಾನಿಸಲಾಯಿತು. ೧೨ ಮಕ್ಕಳು ಸಣ್ಣಪುಟ್ಟ ಗಾಯಗೊಂಡಿದ್ದು, ಅವರಿಗೆ ಸವಣೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಕ್ಕಳಿಗೆ ಸ್ಥಳೀಯ ಶಾಲೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಸ್ಥಳಕ್ಕೆ ಸವಣೂರು ಉಪವಿಭಾಗಧಿಕಾರಿ, ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.