ಶಾಲಾ ಪ್ರವಾಸ ಬಸ್ ಪಲ್ಟಿ ಮಕ್ಕಳಿಗೆ ಗಾಯ

(ಸಂಜೆವಾಣಿ ವಾರ್ತೆ)
ರಾಯಚೂರು,ಡಿ.೨೪:ಮಕ್ಕಳನ್ನು ಶಾಲಾ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಬಸ್ ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದ ಪರಿಣಾಮ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಳಿಗಿನ ಜಾವ ಸುಮಾರು ೨ ಗಂಟೆ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದಿದೆ. ಯಾವುದೇ ಸಾವು-ನೋವು ಸಂಭವಿಸದಿದ್ದರೂ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಸ್ ಉರುಳಿ ಬಿದ್ದಿದ್ದರಿಂದ ಅನ್ಯ ಮಾರ್ಗವಿಲ್ಲದೆ ಮತ್ತೊಂದು ಬಸ್‌ನ ವ್ಯವಸ್ಥೆಯಾಗುವವರೆಗೆ ಶಿಕ್ಷಕರು, ಮಕ್ಕಳು ರಾತ್ರಿಯಿಡೀ ಚಳಿಯಲ್ಲಿ ಪರದಾಡಿದ್ದಾರೆ. ನಂತರ ದೇವದುರ್ಗ ಬಸ್ ಡಿಪೊಗೆ ಮಾಹಿತಿ ನೀಡಿದ ಕಾರಣ ಅಧಿಕಾರಿಗಳು ಮತ್ತೊಂದು ಬಸ್‌ನ ವ್ಯವಸ್ಥೆ ಕಲ್ಪಿಸಿದ್ದಾರೆ. ನಂತರ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.