ಬೆಂಗಳೂರು, ಮೇ ೩೦- ಶಾಲಾ ಪಠ್ಯಗಳ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ. ಹಂತ ಹಂತವಾಗಿ ಶಾಲಾ ಪಠ್ಯದ ಪರಿಷ್ಕರಣೆ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ಪಠ್ಯ ಪರಿಷ್ಕರಣಾ ಸಂಬಂಧ ಮುಖ್ಯಮಂತ್ರಿ ಸಿದ್ಧಱಾಮಯ್ಯ ಅವರೊಂದಿಗೂ ಚರ್ಚಿಸಿದ್ದೇನೆ. ಪಠ್ಯ ಪರಿಷ್ಕರಣೆ ಸಂಬಂಧ ತಜ್ಞರ ತಂಡ ರಚನೆ ಮಾಡುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯ ಕ್ರಮಗಳ ಪರಿಷ್ಕರಣೆ ಲೋಪದಿಂದ ಕೂಡಿದೆ. ನಾಳೆಯಿಂದಲೇ ಶಾಲೆಗಳು ಆರಂಭಗೊಳ್ಳಲಿವೆ. ಈಗಾಗಲೇ ಪಠ್ಯ ಪುಸ್ತಕಗಳು ಮುದ್ರಣಗೊಂಡು ಶಾಲೆಗಳಿಗೆ ತಲುಪಿವೆ. ಏಕಾಏಕಿ ಅವುಗಳನ್ನು ಹಿಂಪಡೆಯುವುದು ಅಥವಾ ಪರಿಷ್ಕರಣೆ ಮಾಡುವುದರಿಂದ ಗೊಂದಲಗಳಾಗುತ್ತವೆ. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಲಿದೆ. ಹಾಗಾಗಿ ಸರ್ಕಾರ ಎಚ್ಚರಿಕೆ ಹೆಜ್ಜೆ ಇಡಲಿದೆ ಎಂದರು.
ಬಿಜೆಪಿ ಅವಧಿಯಲ್ಲಿ ಪಠ್ಯ ಪರಿಷ್ಕರಣೆಯನ್ನು ಸರಿಪಡಿಸುವುದಾಗಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದೆ. ಅದಕ್ಕೆ ನಾವು ಬದ್ಧ ಇದ್ದೇವೆ. ಯಾವ ರೀತಿ ಪಠ್ಯ ಪರಿಷ್ಕರಣೆ ನಡೆಸಬೇಕು ಎಂಬುದರ ಬಗ್ಗೆ ತಜ್ಞರ ಸಮಿತಿ ರಚನೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. ಎಲ್ಲದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಿನ್ನೆ ಸಮಾಲೋಚನೆ ನಡೆಸಿದ್ದೇನೆ ಎಂದರು.
ಹಿಜಾಬ್ ವಿವಾದ ಈಗಾಗಲೇ ಸುಪ್ರೀಂಕೋರ್ಟ್ ಅಂಗಳದಲ್ಲಿದೆ .ಹಾಗಾಗಿ ಈ ಬಗ್ಗೆ ಶಿಕ್ಷಣ ಇಲಾಖೆ ಯಾವುದೇ ನಿಲುವು ಪ್ರಕಟಿಸಲು ಸಾಧ್ಯವಿಲ್ಲ. ಕಾನೂನು ಇಲಾಖೆ ಈ ಬಗ್ಗೆ ಉಸ್ತುವಾರಿ ನೋಡಿಕೊಳ್ಳುತ್ತದೆ. ನ್ಯಾಯಾಲಯದ ತೀರ್ಮಾನವನ್ನು ನೋಡಿಕೊಂಡು ಹಿಜಾಬ್ ವಿಚಾರದಲ್ಲಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.