ಶಾಲಾ ಕೊಠಡಿಗಳಿಗೆ ಭೂಮಿಪೂಜೆ


ಬ್ಯಾಡಗಿ,ನ.17: ಕ್ಷೇತ್ರದಲ್ಲಿ ತಾವು ಕೈಗೊಂಡಿರುವ ಅಭಿವೃಧ್ದಿ ಕಾರ್ಯಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳೇ ತಮಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶ್ರೀರಕ್ಷೆಯಾಗಿದ್ದು, ಮತ್ತೊಮ್ಮೆ ಬ್ಯಾಡಗಿ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಲು ತಮಗೆ ಕ್ಷೇತ್ರದ ಮತದಾರರ ಬೆಂಬಲದ ಆಶೀರ್ವಾದ ಸಿಗುವುದು ಖಚಿತವೆಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಮ್ಮ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

ತಾಲೂಕಿನ ಬಡಮಲ್ಲಿ, ಹಿರೇಹಳ್ಳಿ, ಕಾಗಿನೆಲೆ ಹಾಗೂ ಹೆಡಿಗ್ಗೊಂಡ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯ ನಿಮಿತ್ಯ ಪಂಚಾಯತರಾಜ್ ತಾಂತ್ರಿಕ ಉಪವಿಭಾಗದ ವತಿಯಿಂದ ವಿವೇಕ್ ಯೋಜನೆಯಡಿ 1.11ಕೋಟಿ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 8ಶಾಲಾ ಕೊಠಡಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯ ಪರ್ವ ಸಾಧಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಅತಿವೃಷ್ಟಿಯಿಂದ ಹಾನಿಗೊಳಗಾದ ಶಾಲಾ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಕೋಟ್ಯಾಂತರ ರೂಗಳ ಅನುದಾನವನ್ನು ಒದಗಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಪೂರಕವಾಗುವಂತೆ ಕ್ರಮ ವಹಿಸಿದೆ. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವೇಕ್ ಯೋಜನೆಯಡಿ 30 ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.30ಕೋಟಿರೂಗಳ ಅನುದಾನ ದೊರಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಶಿವಾನಂದ ಯಮುನಕ್ಕನವರ, ಕೆಡಿಪಿ ಸದಸ್ಯ ಎನ್.ಎಫ್.ಹರಿಜನ, ಎಪಿಎಂಸಿ ಮಾಜಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಎಇಇ ಡಿ.ಎಲ್.ಕಲ್ಲೊಳ್ಕರ್, ಬಿಇಓ ಈರಪ್ಪ ಬೆನಕಪ್ಪ, ಇಂಜನೀಯರ್ ವೈ.ಕೆ. ಮಟಗಾರ, ವಿವಿಧ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಬಿಜೆಪಿ ಮುಖಂಡರು, ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.