ಶಾಲಾ-ಕಾಲೇಜು ಪ್ರಾರಂಭ: ಸೂಕ್ತ ಬಸ್ ವ್ಯವಸ್ಥೆಗೆ ಒತ್ತಾಯ

ರಾಯಚೂರು,ಜ.೭-ಜ. ೧ರಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು, ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜು ಮಕ್ಕಳಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಕೊರೋನಾ ವೈರಸ್ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳು ೯ ತಿಂಗಳುಗಳ ಕಾಲ ಸಂಪೂರ್ಣ ಸ್ತಬ್ದವಾಗಿದ್ದು , ಪ್ರಸ್ತುತ ಜನವರಿ ೧ ರಿಂದ ಶಾಲಾ ಕಾಲೇಜುಗಳು ಪುನರ್ ಆರಂಭಗೊಂಡಿದ್ದು , ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಶಾಲಾ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಮತ್ತು ಸಾರ್ವಜನಿಕರು ರಾಯಚೂರು ನಗರಕ್ಕೆ ಬರಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಜನತೆಗೆ ತೊಂದರೆಯುಂಟಾಗಿದ್ದು, ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಬಸ್ ಸಂಚಾರವನ್ನು ಪ್ರಾರಂಭಿಸಲು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಈಗಾಗಲೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ರೈತ ಕುಟುಂಬಗಳಿಗೆ ಸೇರಿದ್ದು, ಅವರ ಜೀವನ ತೀರಾ ದುಸ್ತರವಾಗಿದೆ. ಕಾರಣ ಅವರ ವಿದ್ಯಾಭ್ಯಾಸ ಇನ್ನುಮುಂದಾದರೂ ಸುಗಮವಾಗಿ ನಡೆಯಲು ತಾವುಗಳು ತಕ್ಷಣದಿಂದಲೇ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಣಗೌಡ ಕಡಗಂದೊಡ್ಡಿ, ತಾಲೂಕ ಅಧ್ಯಕ್ಷ ದೇವರಾಜ ನಾಯಕ, ತಾಲೂಕ ಉಪಾಧ್ಯಕ್ಷ ಶ್ರೀಧರ, ಜಿಲ್ಲಾ ಕಾರ್ಯದರ್ಶಿ ನರಸಪ್ಪ ಯಾದವ್ ಹೊಕ್ರಾಣಿ, ತಾಲೂಕ ಗೌರವಾಧ್ಯಕ್ಷ ಹುಲಿಗಪ್ಪ ಜಾಲಿಬೆಂಚಿ, ಡಿ.ಜೆ.ಕಾಸೀಮ್, ದೇವ ಕುಮಾರ, ರೈತ ಮುಖಂಡರಾದ ಮಲ್ಲಿಕಾರ್ಜುನ ಮಮದಾಪೂರ, ಅಯ್ಯಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.