ಮಕ್ಕಳಿಗೆ ಸೋಂಕು ತಪಾಸಣೆಗೆ ನಿರ್ಧಾರ

ಕರಾವಳಿ ಜಿಲ್ಲೆಯ ಪ್ರವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆರತಿ ಎತ್ತಿ ತಿಲಕವಿಟ್ಟು ಆತ್ಮೀಯವಾಗಿ ಬರಮಾಡಿಕೊಂಡರು.

ಮಂಗಳೂರು, ಆ. ೧೨- ಕೊರೊನಾ ೩ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲಬಹುದು ಎಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ನಗರ ಪ್ರದೇಶ ಹಾಗೂ ಹಳ್ಳಿ ಹಳ್ಳಿಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಮತ್ತು ಎರಡನೇ ಅಲೆಯಲ್ಲಿ ವಯಸ್ಸಾದವರು, ವಯಸ್ಕರಿಗೆ ಸೋಂಕು ತಗುಲಿತ್ತು. ೩ನೇ ಅಲೆಯಲ್ಲಿ ಲಸಿಕೆ ಹಾಕದ ಮಕ್ಕಳಿಗೆ ಸೋಂಕು ತಗುಲಬಹುದು ಎಂದು ತಜ್ಞರು ಹೇಳಿದ್ದಾರೆ. ಹಾಗಾಗಿ, ಮಕ್ಕಳ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಲಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಸೋಂಕು ಪತ್ತೆಹಚ್ಚಿ ಚಿಕಿತ್ಸೆಗೆ ಅಗತ್ಯಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ರಾಜ್ಯದೆಲ್ಲೆಡೆ ಮಕ್ಕಳಿಗೆ ಅಗತ್ಯ ಪೌಷ್ಠಿಕಾಂಶಗಳನ್ನು ಒದಗಿಸಿ ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಲಾಗುವುದು. ಎಲ್ಲೆಡೆ ವಾತ್ಸಲ್ಯ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.
ಈಗಾಗಲೇ ಹಾವೇರಿ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಾತ್ಸಲ್ಯ ಯೋಜನೆಯಡಿ ಮಕ್ಕಳ ಶಿಬಿರಗಳನ್ನು ನಡೆಸಿ, ಆರೋಗ್ಯ ತಪಾಸಣೆ, ಅವರ ಬೆಳವಣಿಗೆಯಲ್ಲಿ ಕುಂಠಿತವಾಗಿರುವ ಪರೀಕ್ಷೆ, ಅಪೌಷ್ಠಿಕತೆ ಎಲ್ಲವನ್ನೂ ಪರಿಶೀಲಿಸಿ ಅಗತ್ಯ ಚಿಕಿತ್ಸೆ ನೀಡಿ ಅವಶ್ಯವೆನಿಸಿದರೆ ಆಸ್ಪತ್ರೆಗಳಿಗೆ ದಾಖಲಿಸುವ ಕೆಲಸ ಮಾಡಲಾಗುತ್ತದೆ. ಇದನ್ನೂ ರಾಜ್ಯದೆಲ್ಲೆಡೆ ಜಾರಿ ಮಾಡಲು ಕ್ರಮಕೈಗೊಂಡಿದ್ದೇವೆ. ಈ ಸಂಬಂಧ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಬೆಂಗಳೂರಿಗೆ ಹೋದ ನಂತರ ರಾಜ್ಯದ ಎಲ್ಲೆಡೆ ವಿಸ್ತರಿಸುವುದಾಗಿ ಹೇಳಿದರು. ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ವಾರ್ಡ್ ಜತೆಗೆ ಮಕ್ಕಳ ಐಸಿಯುಗಳನ್ನು ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.
ಎಂತಹ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿದ್ದೇವೆ. ಆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ಗಮನ ನೀಡಿದೆ. ತಜ್ಞರ ಸಲಹೆಯಂತೆ ನೆರೆ ರಾಜ್ಯಗಳಿಂದ ಬರುವವರ ಮೇಲೆ ನಿಗಾ ವಹಿಸಿ ಕಠಿಣ ಕ್ರಮಗಳನ್ನು ಜಾರಿ ಮಾಡಿದ್ದೇವೆ ಎಂದರು.
ಕೇರಳ ಮತ್ತು ಮಹಾರಾಷ್ಟ್ರಗಳಿಂದ ಬರುವವರಿಗೆ ಆರ್‌ಟಿಪಿಸಿಆರ್ ನೆಗೆಟೀವ್ ಕಡ್ಡಾಯ ಮಾಡಿ ಸೋಂಕು ತಡೆಯಲು ಸರ್ಕಾರ ಎಲ್ಲ ಕ್ರಮಕೈಗೊಂಡಿದೆ.
ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಅಪೌಷ್ಠಿಕತೆ ನಿವಾರಣೆ, ಮಕ್ಕಳಲ್ಲಿ ಕೋವಿಡ್ ತಡೆಯುವುದು, ಚಿಕಿತ್ಸೆ ಎಲ್ಲದರ ಬಗ್ಗೆಯೂ ಗಮನಹರಿಸಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಮುಖ್ಯಮಂತ್ರಿಗಳು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನೂತನ ಐಸಿಯು ಘಟಕವನ್ನು ಉದ್ಘಾಟಿಸಿದರು.
ಸ್ವಾಗತ
ಇದಕ್ಕೂ ಮೊದಲು ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಕರಾವಳಿ ಜಿಲ್ಲೆಯ ಪ್ರವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಬೆಂಗಳೂರಿನಿಂದ ಆಗಮಿಸಿದ ಮುಖ್ಯಮಂತ್ರಿಗಳಿಗೆ ಸುಮಂಗಲಿಯರು ಆರತಿ ಎತ್ತಿ, ತಿಲಕವಿಟ್ಟು ಸ್ವಾಗತ ಕೋರಿದರು.
ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಸಚಿವರಾದ ಕೋಟಾಶ್ರೀನಿವಾಸಪೂಜಾರಿ, ಎಸ್.ಎಸ್. ಅಂಗಾರ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಶಾಸಕರಾದ ಯು.ಟಿ. ಖಾದರ್, ರಾಜೇಶ್‌ನಾಯಕ್, ವೇದವ್ಯಾಸ ಕಾಮತ್, ಉಮಾನಾಥಕೋಟ್ಯಾನ್, ಡಾ. ಭರತ್‌ಶೆಟ್ಟಿ, ಹರೀಶ್ ಪೂಂಜಾ, ಜಿಲ್ಲಾಧ್ಯಕ್ಷ ಡಾ. ರಾಜೇಂದ್ರ, ಮಂಗಳೂರು ಮೇಯರ್ ಪ್ರೇಮಾನಂದಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಪೊಲೀಸ್ ಆಯುಕ್ತ ಶಶಿಕುಮಾರ್, ಜಿ.ಪಂ. ಸಿಇಓ ಡಾ. ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೇರಿದಂತೆ ಹಲವರು ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರಿದರು.
ಪುಸ್ತಕ ನೀಡಿ ಸ್ವಾಗತ
ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಹಾರ, ತುರಾಯಿ, ಪುಷ್ಪಗುಚ್ಚಗಳನ್ನು ಬಳಸದಂತೆ ಸರ್ಕಾರಿ ಆದೇಶ ಹೊರ ಬಿದ್ದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಕನ್ನಡ ಪುಸ್ತಕಗಳನ್ನು ನೀಡಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.

ರಿಸ್ಥಿತಿ ಅಮಲೋಕಿಸಿ ಶಾಲೆ ಆರಂಭ
ಎಲ್ಲವನ್ನೂ ಯೋಚಿಸಿ ಈ ತಿಂಗಳ ೨೩ ರಿಂದ ೯, ೧೦ ಮತ್ತು ಪಿಯುಸಿ ತರಗತಿಗಳನ್ನು ಆರಂಭಿಸುವ ತೀರ್ಮಾನ ಮಾಡಿದ್ದೇವೆ. ಇದರ ಪ್ರಗತಿಯನ್ನು ನೋಡಿಕೊಂಡು ಮುಂದೆ ಇತರ ತರಗತಿಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ತಿಂಗಳ ೨೩ ರಿಂದ ೧೨ನೇ ತರಗತಿವರೆಗೆ ಶಾಲಾ-ಕಾಲೇಜುಗಳು ಆರಂಭವಾಗಲಿದೆ. ದಿನಾ ಬಿಟ್ಟು ದಿನಾ ಬ್ಯಾಚ್‌ಗಳಲ್ಲಿ ತರಗತಿಗಳು ನಡೆಯಲಿವೆ ಎಂದರು.
ಎಲ್ಲವನ್ನೂ ಯೋಚನೆ ಮಾಡಿಯೇ ೯ ರಿಂದ ೧೨ನೇ ತರಗತಿ ಆರಂಭಕ್ಕೆ ತೀರ್ಮಾನ ಮಾಡಿದ್ದೇವೆ. ಮುಂದೆ ಇದರ ಪ್ರಗತಿಯನ್ನು ನೋಡಿಕೊಂಡು ಇತರ ತರಗತಿ ಆರಂಭಕ್ಕೆ ಸೂಕ್ತ ತೀರ್ಮಾನ ಮಾಡುತ್ತೇನೆ ಎಂದರು.
ಠಿಣ ಕ್ರಮ
ಶಾಸಕ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕ್ರಮ ಜರಿಗಿಸುತ್ತೇವೆ. ನಾನು ಈಗಾಗಲೇ ಶಾಸಕರ ಜತೆ ಮಾತನಾಡಿದ್ದೇನೆ. ಮಧ್ಯರಾತ್ರಿಯೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಆರೋಪಿಗಳ ಬಂಧನ ಶೀಘ್ರ ಆಗಲಿದೆ ಎಂದರು.